ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್
ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದ ಎಂಟಕ್ಕೆ ಸೇರ್ಪಡೆ ಮಾಡುವಂತೆ ರಾಜ್ಯಸಭಾ ಸದಸ್ಯ ಪಿ. ಸಂತೋಷ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೇರಳದ ಸಿಪಿಐ ಪಕ್ಷದ ರಾಜ್ಯಸಭಾ ಸದಸ್ಯರಾದ ಸಂತೋಷ್ ಕುಮಾರ್, ಭಾರತೀಯ ಸಂವಿಧಾನದ 345 ವಿಧಿ ಅನ್ವಯ ತುಳು ಭಾಷೆಯನ್ನು ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ದ್ವಿತೀಯ ಭಾಷೆಯನ್ನಾಗಿ ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. ತುಳುವಿನ ಮಹತ್ವ ಹಾಗೂ ಇತಿಹಾಸದ ಕುರಿತೂ ಅವರು ತಮ್ಮ ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.
ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಈ ಪತ್ರವನ್ನು ಬರೆಯಲಾಗಿದೆ. ಸಾಹಿತಿಗಳು, ಕಲಾವಿದರು ಹಾಗೂ ಹೋರಾಟಗಾರರು ಈ ಪತ್ರ ಅಭಿಯಾನವನ್ನು ನಡೆಸುತ್ತಿದ್ದು, ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗುತ್ತಿದೆ.