ಮುಡಾ ಪ್ರಕರಣ | ಲೋಕಾಯುಕ್ತ ಬಿ.ರಿಪೋರ್ಟ್ ಪ್ರಶ್ನಿಸಿ ಈಡಿ ಸಲ್ಲಿಸಿದ್ದ ಅರ್ಜಿ; ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು : ಮುಡಾ ಅಕ್ರಮ ನಿವೇಶನ ಹಂಚಿಕೆಯಲ್ಲಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲವೆಂದು ಲೋಕಾಯುಕ್ತ ಬಿ.ರಿಪೋರ್ಟ್ ಪ್ರಶ್ನಿಸಿ ಈಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.
ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು, ಈಡಿ ಸಲ್ಲಿಸಿರುವ ಅರ್ಜಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಈಡಿ ಅರ್ಜಿಯಲ್ಲಿ ತನಿಖೆ ಬಗ್ಗೆಯೂ ಸ್ಪಷ್ಟತೆಯಿಲ್ಲ. ಲೋಕಾಯುಕ್ತ ಪೊಲೀಸರಿಗೆ ಈಡಿ ಒಂದು ಪತ್ರ, 27 ದಾಖಲೆ ನೀಡಿತ್ತು. ಈ ದಾಖಲೆಗಳನ್ನು ಪರಿಗಣಿಸಿ ಲೋಕಾಯುಕ್ತ ತನಿಖಾಧಿಕಾರಿ ಬಿ.ರಿಪೋರ್ಟ್ ಸಲ್ಲಿಸಿದ್ದಾರೆ. ಈಡಿಯ ಪತ್ರ ಮಾಧ್ಯಮಗಳಿಗೂ ಸೋರಿಕೆಯಾಗಿತ್ತು. ಅಲ್ಲದೆ, ಈಡಿ ಪತ್ರ , ದಾಖಲೆಗಳನ್ನು ಆರೋಪಪಟ್ಟಿಯ ಪೇಜ್ ನಂಬರ್ 646 ರಲ್ಲಿ ಸಲ್ಲಿಸಲಾಗಿದೆ. ಅಲ್ಲದೇ ಲೋಕಾಯುಕ್ತ ತನಿಖಾಧಿಕಾರಿಯ ಅಭಿಪ್ರಾಯವನ್ನೂ ದಾಖಲಿಸಲಾಗಿದೆ. ಈಡಿ ಬಿ ರಿಪೋರ್ಟ್ ಪ್ರಶ್ನಿಸಲು ಅರ್ಹನಾದ ನೊಂದ ವ್ಯಕ್ತಿಯಲ್ಲ. ಈಡಿಗೆ ಈ ರೀತಿಯ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ವೆಂಕಟೇಶ್ ಅರಬಟ್ಡಿ ಅವರು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದರು.
ತನಿಖಾಧಿಕಾರಿ ಕಲೆ ಹಾಕಿದ ದಾಖಲೆಗಳು, ಇತರರು ನೀಡಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ಲೋಕಾಯುಕ್ತ ತನಿಖಾಧಿಕಾರಿ ಅಭಿಪ್ರಾಯ ನೀಡಿದ್ದಾರೆ. 3ನೇ ವ್ಯಕ್ತಿಯಾದ ಈಡಿಗೆ ಅವಕಾಶ ನೀಡಿದರೆ ಸಮಸ್ಯೆ ಆಗಲಿದೆ. ಹೀಗಾಗಿ ಈಡಿ ಅರ್ಜಿ ಪರಿಗಣಿಸದಂತೆ ಲೋಕಾಯುಕ್ತ ಪರ ವಕೀಲರುಮನವಿ ಮಾಡಿದರು.
ಬಳಿಕ ಈಡಿ ಪರ ವಕೀಲ ಮಧುಕರ್ ದೇಶಪಾಂಡೆ ವಾದ ಮಂಡಿಸಿ, ಪಿಎಂಎಲ್ ಎ ಕಾಯ್ದೆಯ 66(2) ಅಡಿ ಈಡಿ ಶಾಸನಬದ್ದ ಮಾಹಿತಿದಾರ. ವಿಜಯ್ ಮದನ್ ಲಾಲ್ ಚೌಧರಿ ಕೇಸ್ ನಲ್ಲಿ ಈಡಿ ಅಧಿಕಾರ ಸ್ಪಷ್ಟಪಡಿಸಲಾಗಿದೆ. 2022 ರಲ್ಲಿಯೂ ಮಾರ್ಟಿನ್ ತೀರ್ಪು, ನಾಗರಾಜ್ ತೀರ್ಪುಗಳಿವೆ. ಈಡಿ ಅಧಿಕಾರ ಸಮರ್ಥಿಸುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಈಡಿ, ಸ್ಥಳೀಯ ಪೊಲೀಸರ ತನಿಖೆ ಪರಸ್ಪರ ಪೂರಕವಾಗಿರಬೇಕೆಂದು ತೀರ್ಪಿದೆ. ಈ ಕೇಸ್ ಗಳಲ್ಲಿ ನೊಂದ ವ್ಯಕ್ತಿಗಳಿಗೆ ಮುಖವಿರಬೇಕೆಂದಿಲ್ಲ. ಈಡಿ ಕೂಡಾ ಬಿ.ರಿಪೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಬಹುದೆಂದು ವಾದ ಮಂಡಿಸಿದರು.
ನಂತರ ದೂರುದಾರ ಸ್ನೇಹಿಮಹಿ ಕೃಷ್ಣ ಪರ ವಕೀಲರು ವಾದ ಮಂಡಿಸಿ, ಯಾವುದೇ ವ್ಯಕ್ತಿ ಮಾಹಿತಿ ನೀಡಿದರೆ ಅವರನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಆದರೆ ಲೋಕಾಯುಕ್ತ ಪೊಲೀಸರು ಒಂದು ರೀತಿ, ಈಡಿ ಮತ್ತೊಂದು ರೀತಿ ವರದಿ. ಈಡಿಯ ವರದಿಯನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಎಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ.