ಹರ್ಯಾಣ ಚುನಾವಣೆ ಮೇಲೆ ‘ಮುಡಾ’ ಪ್ರಕರಣದ ಪರಿಣಾಮ ಬೀರಿದೆ : ಕೆ.ಬಿ.ಕೋಳಿವಾಡ
ಬೆಂಗಳೂರು : ‘ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಿದೆ’ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ನನ್ನ ಹೇಳಿಕೆಗೆ ಈಗಲೂ ಬದ್ದವಾಗಿದ್ದೇನೆ. ಪಕ್ಷಕ್ಕೆ ಧಕ್ಕೆಯಾದರೆ ನೋಟಿಸ್ ನೀಡುತ್ತಾರೆ. ಆದರೆ, ನಾನು ಪಕ್ಷದ ದೃಷ್ಟಿಯಿಂದಲೇ ಹೇಳಿಕೆ ನೀಡಿದ್ದೇನೆ’ ಎಂದು ಸಮರ್ಥನೆ ನೀಡಿದರು.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕರ್ನಾಟಕ ರಾಜ್ಯದ ಬಗ್ಗೆ ಮಾತನಾಡಿದರು. ಇದು ಪರಿಣಾಮ ಆಗಿದೆ. ನಾನು ಸಕ್ರಿಯ ರಾಜಕಾರಣದಲ್ಲಿಲ್ಲ. ಆದರೆ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ. ಸಿಎಂ ರಾಜೀನಾಮೆ ನೀಡುವುದು ಸೂಕ್ತ ಎಂದು ಕೋಳಿವಾಡ ಪುನರುಚ್ಚರಿಸಿದರು.
ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಸಂಬಂಧ ನಾನು ಮನೆ-ಮನೆ ತಿರುಗಾಡಿದ್ದೇನೆ. ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ಓಡಾಡಿದ್ದು ನನಗೆ ಗೊತ್ತಿಲ್ಲ. ನಮ್ಮ ತಾಲೂಕಿನಲ್ಲಿ ಸರ್ವೆ ಮಾಡುವವರ ಜೊತೆಗೆ ಮನೆ-ಮನೆಗೆ ಹೋಗಿದ್ದೇವೆ. ಕಾಂತರಾಜ ವರದಿ ಕೇವಲ ಆರ್ಥಿಕ-ಶೈಕ್ಷಣಿಕ ಜನಗಣತಿ ಮಾತ್ರವಲ್ಲ, ಅದು ಜಾತಿ ಜನಗಣತಿಯೂ ಹೌದು. ಅವೈಜ್ಞಾನಿಕ ಎಂದರೆ ಏನೂ ಅಂತ ಅರ್ಥ ಆಗುತ್ತಿಲ್ಲ. ಇದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸುವುದಿಲ್ಲ. ಕೂಡಲೇ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.