ಮುಡಾ ಹಗರಣ | ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವ ವಿಶ್ವಾಸವಿದೆ : ಟಿ.ಜೆ.ಅಬ್ರಾಹಂ

Update: 2024-08-06 14:50 GMT
ಸಿದ್ದರಾಮಯ್ಯ/ಥಾವರ್‌ಚಂದ್‌ ಗೆಹ್ಲೋಟ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ನೀಡುವ ವಿಶ್ವಾಸವಿದೆ ಎಂದು ಸಾಮಾಜಿ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಿಳಿಸಿದ್ದಾರೆ.

ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಾನು ನೀಡಿದ ದೂರಿನ ಆಧಾರದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳಿದರು.

ಆದರೆ, ಸಚಿವ ಸಂಪುಟ ಸಭೆಯು ರಾಜ್ಯಪಾಲರು ಕೊಟ್ಟಿರುವ ನೋಟಿಸ್ ಸರಿಯಲ್ಲ, ಅದನ್ನು ಹಿಂಪಡೆಯುವಂತೆ ಸಲಹೆ ಕೊಟ್ಟಿದೆ. ಆದುದರಿಂದ, ರಾಜ್ಯಪಾಲರು ನನ್ನ ಬಳಿ ಈ ಪ್ರಕರಣದ ಕುರಿತು ಮತ್ತಷ್ಟು ಸ್ಪಷ್ಟೀಕರಣ ಕೋರಿದ್ದರು. ಅದರಂತೆ, ಅವರು ಕೇಳಿದ ವಿಷಯಗಳಿಗೆ ನಾನು ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಇವತ್ತು ರಾಜ್ಯಪಾಲರಿಗೆ ಯಾವುದೆ ಹೆಚ್ಚುವರಿ ದಾಖಲೆಗಳನ್ನು ನಾನು ಕೊಟಿಲ್ಲ. ಕಳೆದ ಬಾರಿ ದೂರು ನೀಡುವಾಗ ಕೊಟ್ಟಿರುವ ದಾಖಲೆಗಳ ಕುರಿತು ಪುನಃ ಚರ್ಚೆ ಮಾಡಲಾಯಿತು ಎಂದು ಹೇಳಿದ ಅಬ್ರಾಹಂ, ಸರಕಾರ ನನ್ನ ವಿರುದ್ಧ ಆಪಾದನೆಗಳನ್ನು ಮಾಡಿದೆ. ಆದರೆ, ನನ್ನ ವಿರುದ್ಧ ಯಾವುದೆ ದೂರುಗಳು ಇಲ್ಲ. ಪ್ರಕರಣಗಳು ಇಲ್ಲ ಎಂದು ಹೇಳಿದರು.

ರಾಜ್ಯಪಾಲರು ನನ್ನನ್ನು ಕರೆಸಿಕೊಂಡು ಸ್ಪಷ್ಟೀಕರಣ ಕೇಳಿರುವುದು ನೋಡಿದರೆ, ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಅಬ್ರಾಹಂ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News