ಮೂಡಿಗೆರೆ | ಆಧಾರ್ ಕಾರ್ಡ್ ಇಲ್ಲದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿಯನ್ನು ಬಸ್ ನಿಂದ ಕೆಳಗಿಳಿಸಿದ ಕಂಡಕ್ಟರ್; ಆರೋಪ
ತುಮಕೂರು.ಅ.12: ರಾಜ್ಯ ಸರಕಾರದ ಶಕ್ತ ಯೋಜನೆಯಡಿ ಪ್ರಯಾಣ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಬಳಿ ಒರಿಜಿನಲ್ ಆಧಾರ್ ಕಾರ್ಡು ಇಲ್ಲವೆಂಬ ಕಾರಣಕ್ಕೆ ಹಣ ನೀಡಿ ಟಿಕೆಟ್ ಖರೀದಿಸಲು ಮುಂದಾದರೂ ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದೂರು ಬಳಿ ವರದಿಯಾಗಿದೆ.
ತುಮಕೂರಿನ ನಿವಾಸಿಯಾದ ಸದಾಶಿವನಗರದ ಅಫ್ಝಲ್ ಖಾನ್ ಅವರ ಪುತ್ರಿ ನೂರಾಯಿನ್ ಖಾನ್ ಅವರು ಹತ್ತನೇ ತರಗತಿ ಓದುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಅಲ್ದೂರಿನ ತಮ್ಮ ಅಜ್ಜಿ ಮನೆಗೆ ತೆರಳಿದ್ದರು.ಇಂದು ಬೆಳಗ್ಗೆ ಶೃಂಗೇರಿ-ಬೆಂಗಳೂರು ಬಸ್ಸಿನಲ್ಲಿ ತುಮಕೂರಿಗೆ ಬರಲು ಬಸ್ಸು ಹತ್ತಿದ್ದು, ಕಂಡಕ್ಟರ್ ಅಧಾರ್ ಕಾರ್ಡು ತೋರಿಸುವಂತೆ ಕೇಳಿದಾಗ ತಮ್ಮ ಬಳಿ ಇದ್ದ ಜೆರಾಕ್ಸ್ ಪತ್ರಿಯನ್ನು ತೋರಿಸಿದ್ದಾರೆ. ಇದಕ್ಕೆ ಒಪ್ಪದ ನಿರ್ವಾಹಕ ಒರಜಿನಲ್ ತೋರಿಸುವಂತೆ ತಾಕೀತು ಮಾಡಿದ್ದಾರೆ. ಆದರೆ ನನ್ನ ಬಳಿ ಒರಿಜಿನಲ್ ಇಲ್ಲ. ಬೇಕಾದರೆ ಮೊಬೈಲ್ ನಲ್ಲಿ ಅದರ ಪೋಟೋ ಇದೆ ಎಂದು ತೋರಿಸಲು ಮುಂದಾದರೂ, ಒಪ್ಪಿಕೊಳ್ಳದೆ, ಬಸ್ಸಿನಿಂದ ಇಳಿಯುವವಂತೆ ಒತ್ತಾಯಿಸಿದ್ದಾರೆ.
ಅಗ ವಿದ್ಯಾರ್ಥಿನಿಯು ಹಣ ಕೊಟ್ಟು ಟಿಕೆಟ್ ಖರೀದಿಸಲು ಮುಂದಾಗಿದ್ದು,ಕೈಯಲ್ಲಿದ್ದ 100 ರೂ ನೀಡಿ ಉಳಿದ ಹಣವನ್ನು ತಮ್ನ ಬಳಿಯಿದ್ದ ವ್ಯಾನಿಟಿ ಬ್ಯಾಗ್ ನಿಂದ ತೆಗೆಯಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಆಸ್ಪದ ಕೊಡದ ಕಂಡಕ್ಟರ್ ಊರಿನಿಂದ ಸುಮಾರು ಮೂರು ಕಿ.ಮಿ.ದೂರುದ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬಸ್ಸಿನಿಂದ ಇಳಿಸಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ವಿದ್ಯಾರ್ಥಿನಿಯ ಪೋಷಕರು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.