ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
ಮುಂಬೈ: ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ಕೋಟಿ ರೂ. ಬೇಡಿಕೆಯಿಟ್ಟು ಬೆದರಿಕೆ ಸಂದೇಶ ರವಾನಿಸಿದ ಆರೋಪದ ಮೇಲೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬನನ್ನು ಬುಧವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಹಾವೇರಿ ನಿವಾಸಿಯಾಗಿರುವ 35 ವರ್ಷದ ಆರೋಪಿ ಭಿಕಾರಾಮ್ ಜಲಾರಾಮ್ ಬಿಷ್ಣೋಯಿಯನ್ನು ಬುಧವಾರ ವಿಚಾರಣೆಗೊಳಪಡಿಸಿದ ನಂತರ, ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಜಸ್ಥಾನದ ಜಾಲೋರ್ ನಿವಾಸಿಯಾದ ಬಿಷ್ಣೋಯಿ, ಸೋಮವಾರ ರಾತ್ರಿ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್ ಆ್ಯಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಒಂದು ವೇಳೆ ಸಲ್ಮಾನ್ ಖಾನ್ ಜೀವಂತವಾಗಿ ಉಳಿಯಬೇಕಿದ್ದರೆ, ಅವರು ನಮ್ಮ ದೇವಾಲಯಕ್ಕೆ ಹೋಗಿ ಕ್ಷಮಾಪಣೆ ಕೋರಬೇಕು. ಇಲ್ಲವೆ 5 ಕೋಟಿ ರೂ. ಪಾವತಿಸಬೇಕು. ಒಂದು ವೇಳೆ ಅವರೇನಾದರೂ ಹಾಗೆ ಮಾಡದಿದ್ದರೆ, ಅವರನ್ನು ಹತ್ಯೆಗೈಯ್ಯಲಾಗುವುದು. ನಮ್ಮ ಗುಂಪು ಈಗಲೂ ಸಕ್ರಿಯವಾಗಿದೆ” ಎಂದು ಆ ಬೆದರಿಕೆ ಸಂದೇಶದಲ್ಲಿ ಹೇಳಲಾಗಿತ್ತು. ಇದರೊಂದಿಗೆ ನಾನು ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಎಂದೂ ಆರೋಪಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಈ ಸಂಬಂಧ ಆರೋಪಿಯ ವಿರುದ್ಧ ವೊರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಮುಂಬೈಗೆ ಕರೆ ತರಲಾಗಿದೆ.