ಮತದಾನೋತ್ತರ ಸಮೀಕ್ಷೆಗಳಲ್ಲಿ 350ಕ್ಕಿಂತ ಹೆಚ್ಚು ಸ್ಥಾನ ಪಡೆಯಲಿರುವ ಎನ್‌ಡಿಎ; ಇಂಡಿಯಾ ಮೈತ್ರಿಕೂಟಕ್ಕೆ 125-150 ಸ್ಥಾನ

Update: 2024-06-01 16:04 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಏಳನೇ ಮತ್ತು ಅಂತಿಮ ಹಂತ ಶನಿವಾರ ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆಗೇರುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದ್ದಾರೆ ಎಂದು ಅವು ಭವಿಷ್ಯ ನುಡಿದಿವೆ. 543 ಲೋಕಸಭಾ ಸ್ಥಾನಗಳ ಪೈಕಿ 400ಕ್ಕೂ ಅಧಿಕ ಸ್ಥಾನಗಳ ಗಳಿಕೆಯ ಎನ್‌ಡಿಎ ಕನಸು ನನಸಾಗಲಿದೆ ಎಂದು ಯಾವುದೇ ಸಮೀಕ್ಷೆಯು ಹೇಳಿಲ್ಲ. ಬಿಜೆಪಿಯೂ ತನ್ನ 370 ಸ್ಥಾನ ಗಳಿಕೆಯ ಗುರಿಯನ್ನು ತಲುಪುವ ಸಾಧ್ಯತೆಯಿಲ್ಲ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು 285 ಸ್ಥಾನಗಳನ್ನು ಗಳಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಸಂಜೆ ಅಂದಾಜಿಸಿದ್ದರು. ಆದರೆ ಇಂಡಿಯಾ ಮೈತ್ರಿಕೂಟವು ಈ ಸಂಖ್ಯೆಯ ಸಮೀಪಕ್ಕೂ ತಲುಪಲು ಸಾಧ್ಯವಿಲ್ಲ, ಅದು ಭಾರೀ ಸಂಖ್ಯೆಯಲ್ಲಿ ಸ್ಥಾನಗಳ ಕೊರತೆಯನ್ನು ಎದುರಿಸಲಿದೆ ಎಂದು ಐದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಆರು ಚುನಾವಣೋತ್ತರ ಸಮೀಕ್ಷೆಗಳ ಕ್ರೋಡೀಕರಣವು ಎನ್‌ಡಿಎ 367, ಇಂಡಿಯಾ ಮೈತ್ರಿಕೂಟ 143 ಸ್ಥಾನಗಳನ್ನು ಗೆಲ್ಲುತ್ತವೆ, ಬಿಜೆಪಿಯ ವೈಯಕ್ತಿಕ ಗಳಿಕೆ 327 ಸ್ಥಾನಗಳಾದರೆ ಕಾಂಗ್ರೆಸ್ 52 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸೂಚಿಸಿದೆ.

ಜನ್ ಕಿ ಬಾತ್ ಸಮೀಕ್ಷೆ ಎನ್‌ಡಿಎಗೆ ಗರಿಷ್ಠ ಸ್ಥಾನಗಳನ್ನು ನೀಡಿದೆ. ಎನ್‌ಡಿಎ 362ರಿಂದ 392 ಮತ್ತು ಇಂಡಿಯಾ ಮೈತ್ರಿಕೂಟ 141ರಿಂದ 161 ಸ್ಥಾನಗಳನ್ನು ಗಳಿಸಲಿವೆ ಎಂದು ಅದು ಮುನ್ನಂದಾಜಿಸಿದೆ.

ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಎನ್‌ಡಿಎಗೆ 371 ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 125 ಸ್ಥಾನಗಳನ್ನು ನೀಡಿದೆ.

ಎನ್‌ಡಿಎಗೆ ಕನಿಷ್ಠ ಸ್ಥಾನಗಳನ್ನು ನೀಡಿರುವುದು ದೈನಿಕ ಭಾಸ್ಕರ ಸಮೀಕ್ಷೆ. ಅದರ ಪ್ರಕಾರ ಎನ್‌ಡಿಎ 281ರಿಂದ 350 ಮತ್ತು ಇಂಡಿಯಾ ಮೈತ್ರಿಕೂಟ 145ರಿಂದ 201 ಸ್ಥಾನಗಳನ್ನು ಗೆಲ್ಲಲಿವೆ.

ಅಂದ ಹಾಗೆ ಚುನಾವಣೋತ್ತರ ಸಮೀಕ್ಷೆಗಳು ಯಾವಾಗಲೂ ಸರಿಯಾಗಿರುವುದಿಲ್ಲ. ಆದಾಗ್ಯೂ ಎನ್‌ಡಿಎ ದಕ್ಷಿಣ ಭಾರತ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಎಲ್ಲ ಸಮೀಕ್ಷೆಗಳು ಒಕ್ಕೊರಳಿನಿಂದ ಹೇಳಿವೆ.

ಆಂಧ್ರಪ್ರದೇಶದಲ್ಲಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗಿನ ಮೈತ್ರಿ ಎನ್‌ಡಿಎಗೆ ಲಾಭದಾಯಕವಾಗಿದ್ದು, ಅದು ರಾಜ್ಯದ 25 ಸ್ಥಾನಗಳ ಪೈಕಿ 18ನ್ನು ಗೆಲ್ಲಲಿದೆ. ಕರ್ನಾಟಕದಲ್ಲಿಯೂ ಜನರು ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಒಂದರಿಂದ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತಮಿಳುನಾಡಿನಲ್ಲಿ ತನ್ನ ಖಾತೆಯನ್ನು ತೆರೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ನಿರೀಕ್ಷಿಸಿವೆ.

ಪಶ್ಚಿಮ ಬಂಗಾಳದಲ್ಲಿ 2019ರಲ್ಲಿ 18 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ ತನ್ನ ಗಳಿಕೆಯನ್ನು 22ಕ್ಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.

ಬಿಜೆಪಿ ತನ್ನ ಭದ್ರಕೋಟೆಗಳಾದ ಗುಜರಾತ್, ಮಧ್ಯಪ್ರದೇಶ,‌ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಪ್ರಾಬಲ್ಯವನ್ನು ಮುಂದುವರಿಸಲಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಯೂ ಅದು ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಕಣಿ ನುಡಿದಿವೆ.

ಆದರೆ ಬಿಹಾರವು ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂದಿನ ಚುನಾವಣೆಯಲ್ಲಿ ಅದು ಎನ್‌ಡಿಎಗೆ 40ರಲ್ಲಿ 39 ಸ್ಥಾನಗಳನ್ನು ನೀಡಿತ್ತು. ಆದರೆ ಈ ಸಲ ತೇಜಸ್ವಿ ಯಾದವರ ಆರ್‌ಜೆಡಿ ನೇತೃತ್ವದ ಪ್ರತಿಪಕ್ಷ ಒಕ್ಕೂಟವು ಏಳು ಸ್ಥಾನಗಳನ್ನು ಕಿತ್ತುಕೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ನಿರೀಕ್ಷಿಸಿವೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಮತ್ತು ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯು ಹೇಳಿದೆ.

ನ್ಯೂಸ್ 18 ಸಮೀಕ್ಷೆಯಂತೆ ದಿಲ್ಲಿಯಲ್ಲಿ ಬಿಜೆಪಿ 5ರಿಂದ 7 ಮತ್ತು ಇಂಡಿಯಾ ಮೈತ್ರಿಕೂಟ ಶೂನ್ಯದಿಂದ ಎರಡು ಸ್ಥಾನಗಳನ್ನು, ಪಂಜಾಬಿನಲ್ಲಿ ಬಿಜೆಪಿ 2-4,ಕಾಂಗ್ರೆಸ್ 5-10 ಮತ್ತು ಆಪ್ 0-1 ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ 26-29 ಮತ್ತು ಇಂಡಿಯಾ ಮೈತ್ರಿಕೂಟ 3 ಸ್ಥಾನಗಳನ್ನು ಗೆಲ್ಲಲಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News