ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಮನೆಗೆ ಎನ್ಐಎ ಅಧಿಕಾರಿಗಳ ಭೇಟಿ

PC | indianexpress
ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿ ಹಿಂದಿರುವ ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಭರತ್ ಭೂಷಣ್ ಅವರ ಬೆಂಗಳೂರಿನ ಮನೆಗೆ ಭೇಟಿ ನೀಡಿ ಘಟನೆ ಕುರಿತು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ನಗರದ ಮತ್ತಿಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ಎನ್ ಐಎನ ನಾಲ್ಕು ಅಧಿಕಾರಿಗಳು ಭೇಟಿ ನೀಡಿ ಪತ್ನಿ ಬಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುಮಾರು 12 ಗಂಟೆಗಳ ಕಾಲ ಭರತ್ ಭೂಷಣ್ ಅವರ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರಿಂದ ಎನ್‌ಐಎ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಸುಜಾತ ಅವರ ಬಳಿ ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕಾಶ್ಮೀರ ಪ್ರವಾಸದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವತ್ತು ನೀವು ಕಾಶ್ಮೀರಕ್ಕೆ ಹೋಗಿದ್ದು?, ಯಾವ ಟ್ರಾವೆಲ್ಸ್ ಮೂಲಕ ಹೋಗಿದ್ದಿರೀ?, ಕಾಶ್ಮೀರದಲ್ಲಿ ಎಲ್ಲಿ ಉಳಿದುಕೊಂಡಿದ್ರಿ?, ಪಹಲ್ಗಾಮ್‌ಗೆ ಯಾವತ್ತೂ ಹೋದ್ರಿ?, ಎಷ್ಟೋತ್ತಿಗೆ ಹೋದ್ರಿ? ಎನ್ನುವಂತೆ ಹಲವು ಪ್ರಶ್ನೆಗಳು ಕೇಳಲಾಯಿತು ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಉಗ್ರರು ದಾಳಿ ಮಾಡಿದ ಸಮಯ, ಎಷ್ಟು ಜನ ಇದ್ದರು, ಅವರು ಯಾವ ಭಾಷೆಯಲ್ಲಿ ಮಾತನಾಡಿದರು ಎಂಬ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು. ಭರತ್ ಭೂಷಣ್ ಬಳಿ ಏನಾದ್ರೂ ಮಾತನಾಡಿದ್ರಾ?, ನಿಮ್ಮ ಬಳಿ ಏನ್ ಮಾತನಾಡಿದ್ರು?. ಅವರ ಮುಖದ ಚಹರೆ ನೆನಪು ಇದೆಯಾ?, ಮುಖ ಯಾವ ರೀತಿ ಇತ್ತು, ಮುಖದ ಮೇಲೆ ಯಾವುದಾದರೂ ಮಾರ್ಕ್ ಇತ್ತಾ? ಎಂಬ ಪ್ರಶ್ನೆಗಳ ಕೇಳಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಸುಮಾರು 14ಕ್ಕೂ ಹೆಚ್ಚು ಶಂಕಿತರ ಫೋಟೋಗಳನ್ನು ತೋರಿಸಿದ ಅಧಿಕಾರಿಗಳು, ಇದರಲ್ಲಿ ಯಾರಾದ್ರೂ ಇದ್ರಾ? ಎಂದು ಕೇಳಿದರು. ಭರತ್ ಪತ್ನಿಯ ಹೇಳಿಕೆ ಆಧರಿಸಿ ಎನ್‌ಐಎ ಕೆಲ ರೇಖಾಚಿತ್ರಗಳನ್ನು ಬಿಡಿಸಿದ್ದು, ಈ ರೇಖಾಚಿತ್ರಗಳನ್ನು ತೋರಿಸಿಕೊಂಡು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯದ “ಭಯೋತ್ಪಾದನೆ ಹಾಗೂ ಮೂಲಭೂತವಾದ ನಿಗ್ರಹ’ ವಿಭಾಗದ ಆದೇಶದ ಮೇರೆಗೆ ತನಿಖೆ ವಹಿಸಿಕೊಂಡ ಎನ್‌ಐಎ, ಈ ಪ್ರಕರಣ ಸಂಬಂಧ ಶನಿವಾರ ನೂತನ ಎಫ್‌ಐಆರ್ ದಾಖಲಿಸಿಕೊಂಡಿದೆ.
ಉಗ್ರ ನಿಗ್ರಹ ದಳದ ಐಜಿಪಿ, ಡಿಐಜಿ ಹಾಗೂ ಎಸ್‌ಪಿ ಈ ತನಿಖಾ ತಂಡದ ಮೇಲ್ವಿಚಾರಣೆ ವಹಿಸಿಕೊಂಡಿದ್ದು, ಎಲ್ಲ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೃತಪಟ್ಟ 26 ಮಂದಿಯ ಕುಟುಂಬಗಳು, ಇತರೆ ಸ್ಥಳೀಯರನ್ನೂ ವಿಚಾರಣೆಗೊಳಪಡಿಸಿದ್ದಾರೆ.
ಎನ್‌ಐಎಯ ಒಂದು ತಂಡ ಭಾನುವಾರ ಕೋಲ್ಕತಾಗೆ ತೆರಳಿದ್ದು, ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿದೆ. ಪಶ್ಚಿಮ ಬಂಗಾಳದ ಬಿತನ್ ಅಧಿಕಾರಿ, ಸಮೀರ್ ಗುಹ ಹಾಗೂ ಮನೀಶ್ ರಂಜನ್ ಈ ಉಗ್ರ ದಾಳಿ ವೇಳೆ ಮೃತಪಟ್ಟರು.
ಎನ್‌ಐಎನ ತಂಡವೊಂದು ಎ.23ರಂದು ಬೈಸರಣ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜತೆಗೆ ಅಂದಿನಿಂದಲೂ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎನ್‌ಐಎ ತಂಡ ಕಾರ್ಯಾಚರಣೆಗೆ ಸಹಾಯ ಮಾಡುತ್ತಿತ್ತು. ದೇಶದಲ್ಲಿ ಭಯೋತ್ಪಾಕ ಚಟುವಟಿಕೆಗಳನ್ನು ನಿಯಂತ್ರಿಸಲೆಂದು ಕಾರ್ಯನಿರ್ವಹಿಸುವ ಈ ಸಂಸ್ಥೆಯು ಇದೀಗ ಅಧಿಕೃತವಾಗಿ ತನಿಖೆಯ ಜವಾಬ್ದಾರಿ ಹೊತ್ತಿದೆ.
ಘಟನೆಯ ಸಂಪೂರ್ಣ ವಿಡಿಯೋ ಪ್ರಮುಖ ಸಾಕ್ಷಿ :
ಸ್ಥಳೀಯ ಫೋಟೋಗ್ರಾಫರ್ ಒಬ್ಬ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು, ಉಗ್ರ ದಾಳಿಯ ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ವರದಿಯಾಗಿದೆ.
ಈ ವಿಡಿಯೋದಿಂದ ಎನ್‌ಐಎ ಮಹತ್ವದ ಮಾಹಿತಿಗಳನ್ನು ಕಲೆಹಾಕುವ ನಿರೀಕ್ಷೆಯಿದೆ. ಉಗ್ರರ ಗುಂಡಿನ ಮೊರೆತ ಕೇಳುತ್ತಿದ್ದಂತೆ ಆತ ತನ್ನ ಜೀವ ಉಳಿಸಿಕೊಳ್ಳಲು ಓಡಿ ಮರವನ್ನೇರಿ ಕುಳಿತು ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.