288 ಕೋಟಿ ರೂ.ಹೂಡಿಕೆಗೆ ರಾಜ್ಯ ಸರಕಾರದ ಜೊತೆ ನಿಫ್ಕೊ ಕಂಪೆನಿ ಒಪ್ಪಂದ
ಬೆಂಗಳೂರು: ರಾಜ್ಯದಲ್ಲಿ ವಾಹನ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ ಸ್ಥಾಪಿಸಲು ದಕ್ಷಿಣ ಕೊರಿಯಾ ಮೂಲದ ನಿಫ್ಕೊ ಕಂಪೆನಿಯ ಅಂಗಸಂಸ್ಥೆಯಾಗಿರುವ ನಿಫ್ಕೊ ಸೌತ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಜೊತೆ ರಾಜ್ಯ ಸರಕಾರವು ಬುಧವಾರ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಹ್ಯುನ್-ಡಾನ್ ಚೋಯ್ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿ, ಕಂಪೆನಿಗೆ ರಾಜ್ಯ ಸರಕಾರವು ಕೊಡಲಿರುವ ಸೌಲಭ್ಯಗಳು ಮತ್ತು ಉತ್ತೇಜನೆಗಳ ಬಗ್ಗೆ ವಿವರಿಸಿದರು. ತದನಂತರ ಸಚಿವರ ಸಮ್ಮುಖದಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಪ್ರಕಾರ ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯು, ವಾಹನಗಳ ಪ್ಲಾಸ್ಟಿಕ್ ಬಿಡಿಭಾಗಗಳನ್ನು ತಯಾರಿಸುವ ಹೊಸ ಘಟಕವನ್ನು ಗೌರಿಬಿದನೂರಿನಲ್ಲಿ ಸ್ಥಾಪಿಸಲು 288 ಕೋಟಿ ರೂ.ಹೂಡಿಕೆ ಮಾಡಲಿದೆ. ಈ ತಯಾರಿಕಾ ಘಟಕದಲ್ಲಿ 400 ಜನರಿಗೆ ಉದ್ಯೋಗ ಅವಕಾಶಗಳು ಲಭ್ಯ ಇರಲಿವೆ. ಇದರಲ್ಲಿ ಶೇ.65ರಷ್ಟು ಉದ್ಯೋಗಗಳು ಮಹಿಳೆಯರಿಗೆ ದೊರೆಯಲಿವೆ. ಈ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.
ರಾಜ್ಯದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ನೀತಿ, ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ, ನೋಂದಣಿ ಪಡೆಯಲು ರಾಜ್ಯ ಸರಕಾರವು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಗೆ ಅಗತ್ಯ ನೆರವು ಕಲ್ಪಿಸಲಿದೆ. ಹುಂಡೈ ಮೋಟರ್ ಇಂಡಿಯಾ, ಕಿಯಾ ಮೋಟರ್ಸ್, ನಿಸಾನ್, ಫೊರ್ಡ್ ಮತ್ತು ಟೊಯೊಟಾ ಮುಂತಾದವುನಿಫ್ಕೊದ ಭಾರತದಲ್ಲಿನ ಪ್ರಮುಖ ಗ್ರಾಹಕ ಕಂಪೆನಿಗಳಾಗಿವೆ.
ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಹ್ಯುನ್-ಡಾನ್ ಚೋಯ್ ಒಪ್ಪಂದಕ್ಕೆ ಸಹಿ ಹಾಕಿ, ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.