ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳ್ಳುವ ಪ್ರಶ್ನೆಯೇ ಇಲ್ಲ : ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುವ ಪ್ರಶ್ನೆಯೇ ಇಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ಸಾವಿರಾರು ಕಾರ್ಯಕರ್ತರಿದ್ದಾರೆ. ನಾವು ರಾಜ್ಯ, ದೇಶದ ಹಿತಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ, ಜೆಡಿಎಸ್ ಮರ್ಜ್ ಆಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರಿಗೆ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರ. ಎಲ್ಲಾ ಭಾಗಕ್ಕೂ ಅವರ ಕೊಡುಗೆ ಇದೆ. ಪ್ರತಿ ಚುನಾವಣೆಯಲ್ಲಿ ನಮ್ಮ ಓಟ್ ಶೇರಿಂಗ್ ಹೆಚ್ಚಾಗುತ್ತಿದೆ. ಪ್ರತಿ ಭಾಗದಲ್ಲೂ ನಮ್ಮ ಪಕ್ಷದ ಹೆಚ್ಚು ಶೇರಿಂಗ್ ಇದೆ. ಪ್ರಾದೇಶಿಕ ಪಕ್ಷ ಉಳಿಸಲು ನಮ್ಮ ಕಾರ್ಯಕರ್ತರು ಎಂತಹದ್ದೇ ಸಮಯ ಇದ್ದರು ಕೆಲಸ ಮಾಡುತ್ತಾರೆ ಎಂದರು.
ದೇವೇಗೌಡರು ಲೋಕಸಭೆ ಚುನಾವಣೆ ಸಮಯದಲ್ಲಿ ಮಾಡಿರುವ ನಿರ್ಧಾರವೇ ಎನ್‍ಡಿಎನೊಂದಿಗಿನ ಮೈತ್ರಿ. ಮೋದಿ ಅವರ ಕೆಲಸ ಮೆಚ್ಚಿ ಮೈತ್ರಿ ಮಾಡಿಕೊಂಡೆವು. ದೇಶದ ಹಿತಕ್ಕಾಗಿ ಮೈತ್ರಿ ಆಯಿತು. ಮೈತ್ರಿಯಿಂದಾಗಿ ಲೋಕಸಭೆಯಲ್ಲಿ ಜನರು ಹೆಚ್ಚು ಸ್ಥಾನ ಕೊಟ್ಟರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಸಮಾಧಾನ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪದ ಪರಿಸ್ಥಿತಿಗೆ ದೂಡಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ನಾಡಿನ ಜನರನ್ನು ಕಾಂಗ್ರೆಸ್ ಸರಕಾರ ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ನಿರಂತರವಾಗಿ ಶೋಷಣೆ ಮಾಡುತ್ತಿದೆ. ಜನರು ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಾವು ‘ಸಾಕಪ್ಪಾ ಸಾಕು ಕಾಂಗ್ರೆಸ್ ಸರಕಾರ' ಎಂಬ ಅಭಿಯಾನ ಶುರು ಮಾಡಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಸರಕಾರದ ವೈಫಲ್ಯತೆ, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸಿಎಂ ಅವರ ಆರ್ಥಿಕ ಸಲಹೆಗಾರರೇ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಅಂತ ಹೇಳಿಕೆ ಕೊಟ್ಟಿದ್ದಾರೆ. ರಾಯರೆಡ್ಡಿ ಅವರಿಗೆ ಧನ್ಯವಾದ ಹೇಳುತ್ತೇನೆ. ಇಷ್ಟು ಮುಕ್ತವಾಗಿ ಆಡಳಿತ ಪಕ್ಷದ ಶಾಸಕರು, ಆರ್ಥಿಕ ಸಲಹೆಗಾರರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಈ ಹಿಂದೆಯೂ ಕೂಡಾ ರಾಯರೆಡ್ಡಿ ಅವರು ಗ್ಯಾರಂಟಿ ಹೇಗೆ ಅಭಿವೃದ್ಧಿ ಮೇಲೆ ಪರಿಣಾಮ ಬಿದ್ದಿದೆ ಎಂದಿದ್ದರು. ರಾಜ್ಯ ಸರಕಾರ ಹೇಗೆ ಆಡಳಿತ ಮಾಡುತ್ತಿದೆ ಅನ್ನುವುದಕ್ಕೆ ಇದು ಸಾಕ್ಷಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕ ಸ್ವರೂಪ್ ಪ್ರಕಾಶ್, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸ್ನೇಹಿತರು ಗಣಿತ ಓದಿಲ್ಲ: ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 2004ರಿಂದ 2014ರವರೆಗೆ ಯುಪಿಎ ಸರಕಾರ ಇತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಸರಕಾರ ಇದ್ದಾಗ ಗ್ಯಾಸ್ ಬೆಲೆ 1,241 ರೂ. ಇತ್ತು. ಈಗ 854 ರೂಪಾಯಿ ಇದೆ. 50 ರೂಪಾಯಿ ಮಾತ್ರ ಹೆಚ್ಚಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಗ್ಯಾಸ್ ಬೆಲೆ ಜಾಸ್ತಿ ಇತ್ತು ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.