ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ: ನಿರ್ಮಲಾನಂದನಾಥ ಸ್ವಾಮಿ ತೀವ್ರ ಖಂಡನೆ

Update: 2025-04-24 12:04 IST
ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ: ನಿರ್ಮಲಾನಂದನಾಥ ಸ್ವಾಮಿ ತೀವ್ರ ಖಂಡನೆ

ನಿರ್ಮಲಾನಂದನಾಥ ಸ್ವಾಮಿ (Photo: Facebook)

  • whatsapp icon

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಪೈಶಾಚಿಕ ಕೃತ್ಯ ಖಂಡನೀಯ. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿರುವುದು ಮನಸ್ಸಿಗೆ ಆಘಾತ ನೀಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದವರಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.

ಭಯೋತ್ಪಾದಕರ ದಾಳಿಯಲ್ಲಿ ಕರ್ನಾಟಕದವರು ಸಾವನ್ನಪ್ಪಿರುವುದು ಅತ್ಯಂತ ದುರದೃಷ್ಟಕರ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಮೃತಪಟ್ಟವರ ಕಳೆಬರವನ್ನು ಜಮ್ಮು ಕಾಶ್ಮೀರದಿಂದ ಸ್ವಗ್ರಾಮಕ್ಕೆ ತರಲು ಸರಕಾರ ಮುಂದಾಗಿರುವುದು ಶ್ಲಾಘನೀಯ ಎಂದು ನಿರ್ಮಲಾನಂದನಾಥ ಸ್ವಾಮಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರ ಅಶಾಂತಿಯ ಬೀಡಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ಕಣಿವೆ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಶಾಂತಿ ನೆಲೆಸಿದೆ. ಇದನ್ನು ಸಹಿಸದ ಉಗ್ರರು ಮನುಷ್ಯತ್ವವನ್ನು ಮರೆತು ಅತ್ಯಂತ ಬರ್ಭರವಾಗಿ ಗುಂಡಿನ ದಾಳಿ ನಡೆಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಂಬನಿ ಮಿಡಿದಿದ್ದಾರೆ.

ಯಾರೇ ಭಾಗಿಯಾಗಿದ್ದರೂ ಅದನ್ನು ನಾವು ಖಂಡಿಸಲೇಬೇಕು. ನಾವೆಲ್ಲರೂ ಒಗ್ಗಟ್ಟಾಗಿರಬೇಕಾದ ಸಮಯ ಇದು ಎಂದು ಸಲಹೆ ನೀಡಿದ್ದಾರೆ.

ಇಲ್ಲಿ ತಪ್ಪುಗಳನ್ನು ಹುಡುಕುವ ಅಗತ್ಯವಿಲ್ಲ. ನಾವೆಲ್ಲರೂ ಕೇಂದ್ರ ಸರ್ಕಾರಕ್ಕೆ ಭಯೋತ್ಫಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಲು ಸಹಕಾರ ನೀಡಬೇಕು. ನಾವು ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲೇಬೇಕು. ಇದು ಭಾರತದ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿಯಾಗಿದೆ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಏನೆಲ್ಲಾ ಸಾಧ್ಯವೋ ಅದನ್ನು ಮಾಡಬೇಕು. ಅದಕ್ಕೆ ಸಹಕಾರ ಕೊಡಬೇಕು ಎಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News