ಬಿಜೆಪಿಯ ಶೇ.40 ಪರ್ಸೆಂಟ್ ಕಮಿಷನ್ ಹಗರಣಕ್ಕೆ ಕ್ಲೀನ್‍ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Update: 2024-11-18 18:24 GMT

ಸಚಿವ ಪ್ರಿಯಾಂಕ್ ಖರ್ಗೆ (Photo:X)

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನಕ್ಕೆ ಸಂಬಂಧಿಸಿದ ಕೇವಲ ಒಂದು ಕಾಮಗಾರಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆಯೇ ಹೊರತು, ಇದು ಬಿಜೆಪಿಯ ಶೇ.40 ಪರ್ಸೆಂಟ್ ಕಮಿಷನ್ ಹಗರಣಕ್ಕೆ ಸಿಕ್ಕಿರುವ ಕ್ಲೀನ್ ಚಿಟ್ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ದಿವಂಗತ ಆರ್.ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿನ ಶೇ.40ರಷ್ಟು ಕಮಿಷನ್ ದಂಧೆಯ ಆರೋಪದ ಕುರಿತು ದ್ವನಿ ಎತ್ತಿದ್ದರು. ಆದರೆ, ಹಿಂದಿನ ಬಿಜೆಪಿ ಸರಕಾರ ತನಿಖೆಗೆ ವಹಿಸಿದ್ದು ಕೇವಲ ಬಿಬಿಎಂಪಿ ಪೂರ್ವ ವಲಯಕ್ಕೆ ಸಂಬಂಧಿಸಿದ ಆಟದ ಮೈದಾನ ಕಾಮಗಾರಿಯ ಒಂದು ಆರೋಪವನ್ನು ಮಾತ್ರ ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ಅಂಬಿಕಾಪತಿಯವರು ಮರಣ ಹೊಂದಿರುವ ಕಾರಣ, ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಹಾಗಾಗಿ ಅಂಬಿಕಾಪತಿಯವರು ಮಾಡಿರುವ ಆಪಾಧನೆಯು ಮೇಲ್ನೋಟಕ್ಕೆ ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ. ಇದನ್ನೇ ಹಿಡಿದುಕೊಂಡ ಬಿಜೆಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಲು ಮುಂದಾಗಿರುವುದು ನಾಚಿಕೆಗೇಡು ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಶೇ.40ರಷ್ಟು ಕಮಿಷನ್‍ಗೆ ಸಂಬಂಧಿಸಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದರೂ ಹಿಂದಿನ ಬಿಜೆಪಿ ಸರಕಾರದ ಏಕೆ ತನಿಖೆಗೆ ವಹಿಸಲು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಪಿಎಸ್ಸೈ ಹಗರಣ, ಗಂಗಾಕಲ್ಯಾಣ ಹಗರಣ, ಕೆಕೆಆರ್‍ಡಿಬಿ ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಹಗರಣಗಳು ನಡೆದಿದ್ದರೂ ಅವುಗಳನ್ನು ಬಿಜೆಪಿ ನಿರಾಕರಿಸುತ್ತಲೇ ಬಂದಿತ್ತು. ಆದರೆ, ಈಗ ಅವೆಲ್ಲಾ ಹಗರಣಗಳು ನಡೆದಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿವಿಧ ಇಲಾಖೆಗಳಲ್ಲಿನ ಶೇ.40ರಷ್ಟು ಕಮಿಷನ್ ಆರೋಪದ ಕುರಿತ ಸಮಗ್ರ ತನಿಖೆಗಾಗಿ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿದ್ದು ಪ್ರಸ್ತುತ ತನಿಖೆ ನಡೆಯುತ್ತಿದೆ, ಈ ಆಯೋಗವು ನೀಡುವ ವರದಿಯ ಆಧಾರದ ಮೇಲೆ ಬಿಜೆಪಿ ಸರಕಾರದ ಶೇ.40ರಷ್ಟು ಕಮಿಷನ್ ಆರೋಪದ ಕುರಿತ ಸತ್ಯಾಸತ್ಯತೆ ಹೊರಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News