ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಸಹಕಾರ: ಮಲ್ಲಿಕಾರ್ಜುನ ಖರ್ಗೆ

Update: 2025-04-23 20:28 IST
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಸಹಕಾರ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

  • whatsapp icon

ಬೆಂಗಳೂರು: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದು, ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಬೇಕು, ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದನೆ ದಾಳಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಘಟನೆ ಆಘಾತಕಾರಿಯಾಗಿದ್ದು, ಮನಸ್ಸಿಗೆ ಬಹಳ ನೋವಾಗಿದೆ. ಈ ದಾಳಿಯು ದೇಶದ ಏಕತೆ ಹಾಗೂ ಸಮಗ್ರತೆ ಮೇಲಿನ ನೇರ ದಾಳಿಯಾಗಿದೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಾಳಿಯಾಗಿದೆ ಎಂದರು.

ಅಮಾಯಕ ನಾಗರಿಕರ ಮೇಲೆ ದಾಳಿ ಮಾಡುವವರು ಮನುಷ್ಯರಲ್ಲ. ಕಾಂಗ್ರೆಸ್ ಪಕ್ಷವು ಈ ಹೇಡಿತನದ ಕೃತ್ಯವನ್ನು ಕಟುವಾಗಿ ಖಂಡಿಸುತ್ತದೆ. ಕೇಂದ್ರ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಿದ್ದು, ಜಮ್ಮು ಕಾಶ್ಮೀರದ ಉಮರ್ ಅಬ್ದುಲ್ಲಾ ಹಾಗೂ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಅನೇಕ ಮಾಹಿತಿ ಕಲೆಹಾಕಿದ್ದೇನೆ. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದು ಭದ್ರತಾ ವೈಫಲ್ಯ, ಆ ವೈಫಲ್ಯ ಎಂದೆಲ್ಲಾ ಚರ್ಚಿಸುವ ಸಮಯವಲ್ಲ. ಎಲ್ಲರೂ ಆಘಾತದಲ್ಲಿದ್ದೇವೆ. ಎಲ್ಲರೂ ಒಂದಾಗಿ ಇದನ್ನು ಎದುರಿಸಬೇಕು. ಈಗ ತಪ್ಪುಗಳನ್ನು ಹುಡುಕುವ ಸಮಯ ಅಲ್ಲ. ಇದು ಸಹಕಾರ ನೀಡುವ ಸಮಯ. ಈ ವಿಚಾರವಾಗಿ ಎ.24ಕ್ಕೆ ಹೊಸದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರವಾಸಿಗರಿಂದಲೇ ಜಮ್ಮು-ಕಾಶ್ಮೀರದ ಜನರ ಜೀವನ ನಡೆಯಬೇಕು. ಉಮರ್ ಅಬ್ದುಲ್ಲಾ ಕೂಡಾ ಇದನ್ನೇ ಹೇಳಿದ್ದಾರೆ. ಇಂತಹ ಘಟನೆಗಳಿಂದ ಆಗುವ ಪರಿಣಾಮಗಳ ಬಗ್ಗೆಯೂ ಉಮರ್ ಅಬ್ದುಲ್ಲಾ ಮಾತನಾಡಿದ್ದಾರೆ. ರಾಜ್ಯದ ಪ್ರಭುತ್ವದ ಮೇಲಿನ ನೇರ ದಾಳಿ ಇದು. ನಾವೆಲ್ಲಾ ಇಂತಹ ಸಂದರ್ಭದಲ್ಲಿ ಒಂದಾಗಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕರ್ನಾಟಕ ಸರಕಾರ ಕೂಡ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿದ್ದು, ನಾನು ಸಂತೋಷ್ ಲಾಡ್ ಅವರ ಜತೆ ಮಾತನಾಡಿದ್ದೇನೆ. ಸಂತೋಷ್ ಲಾಡ್ ಅವರು ಮೃತರ ಕುಟುಂಬದವರು ಹಾಗೂ ಮಕ್ಕಳನ್ನು ಭೇಟಿ ಮಾಡಿದ್ದು, ಕಾಶ್ಮೀರದಲ್ಲಿ ಕರ್ನಾಟಕ ರಾಜ್ಯದಿಂದ ತೆರಳಿರುವ 200 ಪ್ರವಾಸಿಗರನ್ನು ಸಂಪರ್ಕ ಮಾಡಿದ್ದಾರೆ. ಈ ಪ್ರವಾಸಿಗರು ವಿವಿಧ ಹೋಟೇಲ್‍ಗಳಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ವಿಮಾನ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಾತನಾಡಿ, ಉಗ್ರರ ದಾಳಿಯಿಂದ ಎಲ್ಲ ಭಾರತೀಯರು ಆಘಾತಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರು ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಉಗ್ರರ ದಾಳಿಗೆ ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ರಮೇಶ್‍ಬಾಬು ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News