ನಕ್ಸಲೀಯರಿಗೆ ರಾಜಾತಿಥ್ಯ ಎಷ್ಟು ಸರಿ? : ಎನ್.ರವಿಕುಮಾರ್
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರವು ನಕ್ಸಲೀಯರಿಗೆ ರಾಜಾತಿಥ್ಯ ನೀಡಿ ಶರಣಾಗತಿ ಮಾಡಿಸಿದ್ದು ಎಷ್ಟು ಸರಿ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ನಕ್ಸಲೀಯರು ಕರ್ನಾಟಕ ರಾಜ್ಯದಿಂದ ಸಂಪೂರ್ಣ ಶರಣಾಗತಿ ಆಗುತ್ತಿದ್ದರೆ ಮತ್ತು ಅವರ ಸಮಸ್ಯೆ ಪರಿಹಾರ ಆಗುತ್ತಿದ್ದರೆ ಅದು ಒಳ್ಳೆಯ ವಿಷಯ. ಆದರೆ, ಸಿಎಂ ಅವರನ್ನು ಶರಣಾಗುವಂತೆ ಮಾಡಿಕೊಳ್ಳಬೇಕಿತ್ತೇ? ಸಿಎಂ ಕಚೇರಿಯಲ್ಲಿ ಬಂದು ಶರಣಾಗುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮಂತ್ರಿಗಳ ಉಪಸ್ಥಿತಿ, ಸಿಎಂ ಗೃಹ ಕಚೇರಿ ಬಳಕೆ, ಪೊಲೀಸ್ ಇಲಾಖೆ ಉಪಸ್ಥಿತಿ, ಜೊತೆಗೇ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಶರಣಾಗತಿ ನಡೆಸುವುದು ಎಷ್ಟು ಸರಿ. ನಕ್ಸಲೀಯರನ್ನು ಪೊಲೀಸ್ ಇಲಾಖೆ ಮುಂದೆ ಶರಣಾಗುವಂತೆ ಸೂಚಿಸಲು ಅವಕಾಶವಿತ್ತು. ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಅವರಿಗೆ ಜನಬೆಂಬಲ ಇಲ್ಲ ಎಂಬುದು ಗೊತ್ತಾಗಿದೆ. ಮೃತ ಪೊಲೀಸರ, ಜನಸಾಮಾನ್ಯರ ಜೀವನದ ಕುರಿತು ಸರಕಾರ ಯೋಚಿಸಿದೆಯೇ? ಎಂದೂ ಅವರು ಆಕ್ಷೇಪಿಸಿದ್ದಾರೆ.
ನಕ್ಸಲೀಯರಿಗೆ ಪ್ಯಾಕೇಜ್ ಕೊಡುವುದು ಎಷ್ಟು ಸಮಂಜಸ? ಜೀವನಕ್ಕೆ ಆಧಾರ ಆಗಬೇಕೆಂಬ ವಿಷಯ ಇದ್ದರೂ ಅದು ಸರಿಯೇ? ಇದುವರೆಗೆ ಆಗಿರುವ ಎಲ್ಲ ಪ್ರಕರಣಗಳನ್ನೂ ರದ್ದು ಮಾಡುವಿರಾ? ಕೆಲವರ ಮೇಲೆ 15 ಕೇಸಿದ್ದರೆ, ಇನ್ನೂ ಹಲವರ ಮೇಲೆ 10, 5 ಕೇಸುಗಳಿವೆ. ಅನೇಕರು ಪೊಲೀಸರನ್ನು ಹತ್ಯೆ ಮಾಡಿದ್ದರೆ, ಇನ್ನೂ ಹಲವರು ಜನರನ್ನೇ ಕೊಂದಿದ್ದಾರೆ. ಲೂಟಿ ಪ್ರಕರಣಗಳೂ ಇವೆ ಎಂದು ಅವರು ಗಮನ ಸೆಳೆದಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಮಾಡುತ್ತಿರುವುದು ಸರಿಯಲ್ಲ. 6 ಜನ ಕೊನೆಯವರು ಎಂದು ಸರಕಾರ ಹೇಳಿದೆ. ಇದಕ್ಕೆ ಏನಾದರೂ ಸಾಕ್ಷ್ಯಾಧಾರ ಇದೆಯೇ?. ಬೇರೆಯವರು ಇದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಪ್ಯಾಕೇಜ್ ಕೊಡುವ ಕುರಿತು ಮರುಪರಿಶೀಲನೆ ಮಾಡಬೇಕು ಎಂದು ರವಿಕುಮಾರ್ ಆಗ್ರಹಿಸಿದ್ದಾರೆ.