ಜೆಡಿಎಸ್‌ ಶಾಸಕರು ಮಾರಾಟದ ವಸ್ತು ಅಲ್ಲ : ಸಿ.ಪಿ.ಯೋಗೇಶ್ವರ್ ವಿರುದ್ಧ ಸುರೇಶ್ ಬಾಬು ವಾಗ್ದಾಳಿ

Update: 2024-11-27 13:48 GMT

 ಸುರೇಶ್ ಬಾಬು

ಬೆಂಗಳೂರು: ಜೆಡಿಎಸ್ ಶಾಸಕರು ಮಾರಾಟದ ವಸ್ತು ಅಲ್ಲ, ನಮ್ಮ ಶಾಸಕರು ಆಮಿಷಗಳಿಗೆ ಮಾರು ಹೋಗುವುದಿಲ್ಲ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಆಕ್ಷೇಪಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಶಾಸಕರನ್ನು ಕರೆತರುವಂತೆ ಟಾಸ್ಕ್ ಕೊಟ್ಟರೆ ಒಂದು ತಿಂಗಳಲ್ಲಿ ಕಾಂಗ್ರೆಸ್‍ಗೆ ಕರೆತರುತ್ತೇನೆಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು. ಗೆದ್ದ ಬಳಿಕ ಸಿ.ಪಿ.ಯೋಗೇಶ್ವರ್ ಮಾತಿನ ದಾಟಿ ಬದಲಾಗಿದೆ. ಅವರ ಭಾವನೆಗಳು ಮಾತಿನ ಮೂಲಕ ಹೊರ ಬರುತ್ತಿದೆ ಎಂದರು.

ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಬಂದಿದೆ. ಚನ್ನಪಟ್ಟಣ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಮತದಾರರನ್ನು ಮನವೊಲಿಸಿ ಮತ ಪಡೆಯುವ ಪ್ರಯತ್ನ ಮಾಡಿದ್ದೆವು. ಆದರೆ, ಕಾಂಗ್ರೆಸ್ ವಾಮಮಾರ್ಗದಿಂದ ಗೆದ್ದಿದೆ ಎಂದು ಸುರೇಶ್ ಬಾಬು ಹೇಳಿದರು.

ಚನ್ನಪಟ್ಟಣದ ಅಭ್ಯರ್ಥಿ ಯಾವತ್ತಾದರೂ ಮುಳ್ಳೆ. ಡಿ.ಕೆ.ಶಿವಕುಮಾರ್ ಇದನ್ನು ಅರಿತುಕೊಳ್ಳಬೇಕು. ನಮ್ಮ ಶಾಸಕರನ್ನು ಕರೆತರುವ ಬಗ್ಗೆ ಮಾತನಾಡಿದ್ದಾರೆ. ನಮ್ಮ ಶಾಸಕರು ಮಾರು ಹೋಗುವುದಿಲ್ಲ ಎಂದು ಸುರೇಶ್ ಬಾಬು ತಿಳಿಸಿದರು.

ನಮ್ಮ ಪಕ್ಷವನ್ನು ರಾಜ್ಯದಿಂದ ತೆಗೆದುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡರನ್ನು ಉಳಿಸಿಕೊಂಡು ಬಂದ ಪಕ್ಷವಿದು. ನಮ್ಮ ಕಾರ್ಯಕರ್ತರ ಪಡೆ ಹೆಚ್ಚಾಗಿದೆ ಎಂದು ಸುರೇಶ್ ಬಾಬು ಹೇಳಿದರು.

ಜಿ.ಟಿ.ದೇವೇಗೌಡರನ್ನು ಪ್ರಚಾರಕ್ಕೆ ಕರೆಯದಿದ್ದಕ್ಕೆ ಭಿನ್ನಾಭಿಪ್ರಾಯವಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಸಿ.ಎಂ.ಇಬ್ರಾಹಿಂ ಅವರದು ಮಾತೇ ಬಂಡವಾಳ. ಅವರು ಏನು ಬೇಕಾದರೂ ಮಾತನಾಡುತ್ತಾರೆ. ಕಾಂಗ್ರೆಸ್‍ನವರು ಯಾರು ಸಹ ಇಬ್ರಾಹಿಂ ಅವರನ್ನು ಕರೆಯುತ್ತಿಲ್ಲ. 18 ಜನ ನಮ್ಮ ಶಾಸಕರು ಇಬ್ರಾಹಿಂ ಜೊತೆಗೂ ಹೋಗುವುದಿಲ್ಲ ಎಂದು ಸುರೇಶ್ ಬಾಬು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ.ರೇವಣ್ಣ ಎ.ಮಂಜು, ಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

ಜಿ.ಟಿ.ದೇವೇಗೌಡ ಗೈರು: ‘ವಿಧಾನಸೌಧದಲ್ಲಿ ನಡೆದ ಜೆಡಿಎಸ್ ನಾಯಕರ ಮಹತ್ವದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನಿರೀಕ್ಷೆಯಂತೆ ಗೈರಾಗಿದ್ದರು. ಈ ವೇಳೆಯಲ್ಲಿ ಅವರ ಗೈರನ್ನು ಸಮರ್ಥಿಸಿಕೊಂಡ ಶಾಸಕ ಸುರೇಶ್‍ಬಾಬು, ಜಿ.ಟಿ.ಡಿ.ಗೆ ತಮ್ಮ ಸ್ಥಾನದ ಬಗ್ಗೆ ಅಸಮಾಧಾನ ಇರುವುದು ನಿಜ. ನಾನು ಸುದ್ದಿಗೋಷ್ಠಿಗೆ ಬರುವಂತೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೂ ಬರುವಂತೆ ಅವರನ್ನು ಕರೆದಿದ್ದು ನಿಜ. ಆದರೆ, ಅವರು ಬರಲಿಲ್ಲ. ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಜೊತೆ ಜಿ.ಟಿ.ದೇವೇಗೌಡರು ಒಮ್ಮೆ ಮಾತಾಡಿದರೆ ಎಲ್ಲವೂ ಸರಿ ಆಗುತ್ತದೆ ಎಂದರು.

ಯೋಗೇಶ್ವರ್‌ಗೆ ನೈತಿಕತೆ ಇಲ್ಲ: ‘ಎಚ್.ಡಿ.ದೇವೇಗೌಡರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕೆಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್ ಬಾಬು, ಚುನಾವಣೆಗಳ ಸೋಲಿನಿಂದ ಎಚ್.ಡಿ.ದೇವೇಗೌಡರು ಯಾವತ್ತೂ ಧೃತಿಗೆಟ್ಟವರಲ್ಲ,. ಯೋಗೇಶ್ವರ್‌ಗೆ ದೇವೇಗೌಡರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಈ ಹಿಂದೆ ಬಿಜೆಪಿಯಲ್ಲಿದ್ದ ಯೋಗೇಶ್ವರ್ 30 ಜನ ಶಾಸಕರನ್ನು ಕಾಂಗ್ರೆಸ್‍ನಿಂದ ಕರೆದುಕೊಂಡು ಬರುವುದಾಗಿ ಹೇಳಿದ್ದರು. ಯೋಗೇಶ್ವರ್ ಬಗ್ಗೆ ಕಾಂಗ್ರೆಸ್‍ನವರು ಎಚ್ಚರಿಕೆಯಿಂದ ಇರಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News