ಚುನಾವಣಾ ತಕರಾರು ಅರ್ಜಿ: ಸುಪ್ರೀಂ ಕೋರ್ಟ್‍ನಲ್ಲಿ ಶೃಂಗೇರಿ ಶಾಸಕರ ಅರ್ಜಿಗೆ ಹಿನ್ನಡೆ

Update: 2024-09-27 17:46 GMT

ಚಿಕ್ಕಮಗಳೂರು: ಚುನಾವಣಾ ತಕರಾರರು ಅರ್ಜಿ ಸಂಬಂಧ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರು ಸರ್ವೋಚ್ಚ ನ್ಯಾಯಾಲದಲ್ಲಿ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆ ಉಂಟಾಗಿದೆ.

ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಮಾಜಿ ಶಾಸಕ ಜೀವರಾಜ್ ಹೈಕೋರ್ಟ್‍ಗೆ ಈ ಹಿಂದೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ರದ್ದು ಕೋರಿ ಟಿ.ಡಿ ರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಾಸಕರಿಗೆ ಇದೀಗ ಹಿನ್ನಡೆಯಾಗಿದೆ.

ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಕೇವಲ 200 ಮತಗಳ ಅಂತರದಲ್ಲಿ ಗೆದ್ದಿದ್ದರು. ಮತದಾನ ಎಣಿಕೆಯಲ್ಲಿ ಅಧಿಕಾರಿಗಳೂ ತಪ್ಪು ಮಾಡಿದ್ದು, ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಮಾಜಿ ಶಾಸಕ ಜೀವರಾಜ್ ಹೈಕೋರ್ಟ್‍ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಜೀವರಾಜ್ ಸಲ್ಲಿಸಿದ್ದ ಚುನಾವಣೆ ತಕರಾರು ಅರ್ಜಿಯನ್ನು ಅಮಾನ್ಯ ಮಾಡಬೇಕೆಂದು ರಾಜೇಗೌಡ ಕೋರಿದ್ದ ಅರ್ಜಿ ಈ ಹಿಂದೆ ವಜಾಗೊಂಡಿತ್ತು. ಅದನ್ನು ಪ್ರಶ್ನಿಸಿ ರಾಜೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಅಂಚೆ ಮತಗಳ ತಿರಸ್ಕಾರ ಕಾನೂನು ಬಾಹಿರ ಎಂಬ ಜೀವರಾಜ್ ವಾದ ಸಮ್ಮತವಾದದ್ದು ಮತ್ತು ಚುನಾವಣಾ ಅಕ್ರಮ ಕುರಿತಾದ ಜೀವರಾಜ್ ಅವರ ವಾದ ಆಲಿಸಿದ ನಂತರ ಹೈಕೋರ್ಟ್ ತೀರ್ಪು ನೀಡಬೇಕು ಎಂದು ಆದೇಶಿಸಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ರಾಜೇಗೌಡ ವಿರುದ್ಧದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಲಿದ್ದು, ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News