ಶಾಸಕ ಸ್ಥಾನದಿಂದ ಸಚಿವ ಝಮೀರ್ ಅಹ್ಮದ್‌ ಅನರ್ಹತೆ ಕೋರಿ ಅರ್ಜಿ: ವಿಚಾರಣೆ ಮುಂದೂಡಿಕೆ

Update: 2023-09-14 17:43 GMT

ಬೆಂಗಳೂರು, ಸೆ.14: ವಸತಿ ಸಚಿವ ಝಮೀರ್ ಅಹಮದ್ ಖಾನ್ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 5ಕ್ಕೆ ಮುಂದೂಡಿದೆ.

ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಆ ಮೂಲಕ ಝಮೀರ್ ಅಹ್ಮದ್‌ ಅವರು ಚುನಾವಣಾ ಅಕ್ರಮ ಎಸಗಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಚಾಮರಾಜಪೇಟೆ ನಿವಾಸಿ ಶಶಾಂಕ್ ಜೆ. ಶ್ರೀಧರ್ ಎಂಬುವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಮುಂದಿನ ವಿಚಾರಣಾ ದಿನಾಂಕದೊಳಗೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳ ಪರ ವಕೀಲರಿಗೆ ಸೂಚಿಸಿತು. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಅದೇ ರೀತಿ ಝಮೀರ್ ಅಹಮದ್ ಸಹ ಚಾಮರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಇದು ಚುನಾವಣಾ ಅಕ್ರಮಕ್ಕೆ ಸಮಾನವಾಗಿದೆ. ಹೀಗಾಗಿ, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ವಾದಿಸಿದರು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News