ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Update: 2024-06-15 17:00 IST
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

ಸಾಂದರ್ಭಿಕ ಚಿತ್ರ (PTI)

  • whatsapp icon

ಬೆಂಗಳೂರು : ಲೋಕಸಭಾ ಚುನಾವಣೆಯ ಬೆನ್ನಲ್ಲೆ ರಾಜ್ಯ ಸರಕಾರವು ವಾಹನ ಸವಾರರಿಗೆ ಬೆಲೆ ಏರಿಕೆಯ ಬರೆ ಎಳೆದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಇದರಿಂದಾಗಿ, ಪೆಟ್ರೋಲ್ ಪ್ರತಿ ಲೀಟರ್ ಗೆ 3 ರೂ. ಹಾಗೂ ಡಿಸೇಲ್ ಪ್ರತಿ ಲೀಟರ್ ಗೆ 3.50 ರೂ.ಹೆಚ್ಚಳ ಆಗಲಿದೆ. ಪೆಟ್ರೋಲ್ ಹಾಲಿ ಇದ್ದ ದರ ಪ್ರತಿ ಲೀಟರ್ ಗೆ 99.83 ರೂ. ಇದ್ದು, ಹೊಸ ದರ 102.85 ರೂ., ಡಿಸೇಲ್ ಹಾಲಿ ಇದ್ದ ದರ ಪ್ರತಿ ಲೀಟರ್ ಗೆ 85.93 ರೂ., ಹೊಸ ದರ 88.93 ರೂ. ಆಗಿದೆ.

ಈ ಹಿಂದೆ ಶೇ.25.92ರಷ್ಟಿದ್ದ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈಗ ಶೇ.3.9ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ.29.84ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಶೇ.14.34ರಷ್ಟು ಇದ್ದ ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ.4.1ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ.18.44ಕ್ಕೆ ಏರಿಕೆಯಾಗಿದೆ.

ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ರಾಜ್ಯ ಸರಕಾರದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟ ಎದುರಾಗುವಂತೆ ಆಗಿದೆ. ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳವಾಗುವುದರಿಂದ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಟ ವೆಚ್ಚವು ಅಧಿಕವಾಗಲಿದೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಢೀಕರಿಸಲು ರಾಜ್ಯ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ದರ ಏರಿಕೆ:

► ಪೆಟ್ರೋಲ್ ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ

►‌ ಡಿಸೇಲ್ ಪ್ರತಿ ಲೀಟರ್‍ಗೆ 3.50 ರೂ. ಹೆಚ್ಚಳ

ಹಾಲಿ ದರ:

►‌ ಪ್ರಟ್ರೋಲ್ ಪ್ರತಿ ಲೀ.ಗೆ 99.83 ರೂ.

ಹೊಸ ದರ 102.85 ರೂ.

► ಡಿಸೇಲ್ ಪ್ರತಿ ಲೀ.ಗೆ 85.93 ರೂ.

ಹೊಸ ದರ 88.93 ರೂ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News