ಹಲ್ಲೆಗೈದು ಭಾಷೆ ಕತೆ ಕಟ್ಟಿದ ಅಧಿಕಾರಿ ವಿರುದ್ಧ ಆಕ್ರೋಶ: ವಿಂಗ್ ಕಮಾಂಡರ್ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

Update: 2025-04-22 20:22 IST
ಹಲ್ಲೆಗೈದು ಭಾಷೆ ಕತೆ ಕಟ್ಟಿದ ಅಧಿಕಾರಿ ವಿರುದ್ಧ ಆಕ್ರೋಶ: ವಿಂಗ್ ಕಮಾಂಡರ್ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

PC : X

  • whatsapp icon

ಬೆಂಗಳೂರು : ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕನ್ನಡಿಗ ವಾಹನ ಸವಾರನ ಮೇಲೆ ಹಲ್ಲೆ ನಡೆಸಿ ಭಾಷಾ ತಾರತಮ್ಯ ಕತೆ ಕಟ್ಟಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಮೊಕದ್ದಮೆ ದಾಖಲಿಸಿರುವ ಇಲ್ಲಿನ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ. ಇನ್ನೊಂದೆಡೆ, ಸುಳ್ಳು ಆರೋಪದಡಿ ವಶಕ್ಕೆ ಪಡೆಯಲಾಗಿದ್ದ ವಾಹನ ಸವಾರ ವಿಕಾಸ್ ಕುಮಾರ್‌ ನನ್ನು ಬಿಡುಗಡೆಗೊಳಿಸಿದ್ದಾರೆ.

ಮಂಗಳವಾರ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ‘ವಿಂಗ್ ಕಮಾಂಡರ್ ಹಲ್ಲೆ ಪ್ರಕರಣ ಭಾಷೆಗೆ ಸಂಬಂಧಪಟ್ಟಿದ್ದು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಕರಣದಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ವಾಯುಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯಬೋಸ್ ಪತ್ನಿ ಬೈಕ್ ಸವಾರನ ವಿರುದ್ಧ ದೂರು ನೀಡಿದ್ದರು. ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬೈಕ್ ಸವಾರ ತಮ ಪತಿ ಮೇಲೆ ಹಲ್ಲೆ ಮಾಡಿ ವಾಹನಕ್ಕೆ ಧಕ್ಕೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ಎರಡನೆ ಪ್ರಕರಣದಲ್ಲಿ ಬೈಕ್ ಸವಾರ ಏರ್‌ ಫೋರ್ಸ್ ಅಧಿಕಾರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಬೈಕ್ ಕಾರಿಗೆ ತಗುಲಿದ ಸಣ್ಣ ಕಾರಣಕ್ಕಾಗಿ ವಾಗ್ವಾದ ನಡೆದು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ಎರಡೂ ಪ್ರಕರಣಗಳು ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ. ಠಾಣಾ ಜಾಮೀನು ಮೇಲೆ ವಿಕಾಸ್ ನನ್ನು ಮನೆಗೆ ಕಳುಹಿಸಲಾಗಿದ್ದು, ಮುಂದಿನ ವಿಚಾರಣೆಗೆ ಏ.24ರಂದು ಹಾಜರಾಗಲು ಹೇಳಲಾಗಿದೆ ಎಂದು ಅವರು ಹೇಳಿದರು.

ವಿಕಾಸ್ ಸ್ಪಷ್ಟನೆ: ಇದಾದ ನಂತರ ವಿಕಾಸ್ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ ನನ್ನ ಪರವಾಗಿ ನಿಂತ ಮಾಧ್ಯಮಗಳು ಹಾಗೂ ಕನ್ನಡಪರ ಸಂಘಟನೆಗಳಿಗೆ ಧನ್ಯವಾದ. ವಿಂಗ್ ಕಮಾಂಡರ್ ವಿರುದ್ದ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ಆಕ್ರೋಶ: ಶಿಲಾದಿತ್ಯ ಬೋಸ್, ಕನ್ನಡಿಗ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ, ಕನ್ನಡಿಗರನ್ನು ತುಚ್ಚವಾಗಿ ನಿಂದಿಸಿರುವುದು ಉತ್ತರ ಭಾರತದವರ ದಬ್ಬಾಳಿಕೆಗೆ ಪುರಾವೆಯಾಗಿದೆ ಎಂದು ಕನ್ನಡ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬೈಯ್ಯಪ್ಪಹಳ್ಳಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಕನ್ನಡ ಪರ ಹೋರಾಟಗಾರರು, ಗುಂಡಾ ರೀತಿ ಹಲ್ಲೆ ಮಾಡಿದ್ದಲ್ಲದೇ, ನಂತರ ಕನ್ನಡ ಭಾಷೆ ವಿಚಾರಕ್ಕೆ ನಡು ರಸ್ತೆಯಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹೇಳಿಕೆ ಅಪ್ಪಟ ಸುಳ್ಳು ಮಾತ್ರವಲ್ಲದೆ, ಸಮಾಜದ ಶಾಂತಿ ಕೆಡಿಸುವ ಅಪರಾಧವಾಗಿದೆ. ಈ ಅಪರಾಧವನ್ನು ಎಸಗಿರುವ ಶಿಲಾದಿತ್ಯ ಬೋಸ್ ಅವರನ್ನು ತಕ್ಷಣ ವಜಾಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಶಿಲಾದಿತ್ಯ ಬೋಸ್ ಯತ್ನ ನಾಚಿಕೆಗೇಡು: ಡಾ.ಜಿ.ಪರಮೇಶ್ವರ್

ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಚಾಲನೆ ವೇಳೆ ನಡೆದ ರಸ್ತೆ ಜಗಳವನ್ನು ಭಾಷಾ ಸಂಘರ್ಷವೆಂದು ಬಿಂಬಿಸುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಯತ್ನ ನಿಜಕ್ಕೂ ನಾಚಿಕೆಗೇಡು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸಣ್ಣ ವಿಚಾರಕ್ಕೆ ಬೈಕ್ ಸವಾರ ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅಪಪ್ರಚಾರ ಮಾಡಿರುವುದು ಕಿಡಿಗೇಡಿತನ. ಕನ್ನಡಿಗರು ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿರುವ ವಿಶಾಲ ಹೃದಯದ, ಸುಸಂಸ್ಕೃತರು. ಭಾಷೆ ವಿಚಾರಕ್ಕೆ ಜಗಳಕ್ಕೆ ಇಳಿಯುವಷ್ಟು ಸಣ್ಣ ಗುಣದವರಲ್ಲ ಎಂದು ಹೇಳಿದ್ದಾರೆ.

ದಾಖಲೆಗಳು ಪೊಲೀಸರಿಗೆ ನೀಡಿ: ದಯಾನಂದ್

ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊ, ಫೋಟೋಗಳನ್ನ ಪ್ರಕಟಿಸುವ ಅಧಿಕಾರವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಸಾರ್ವಜನಿಕ ವಲಯದಲ್ಲಿ ನಡೆಯುವ ಅಪರಾಧ ಕೃತ್ಯಗಳು ಮತ್ತಿತರ ಸಂದರ್ಭಗಳಲ್ಲಿ ಆ ವಿಡಿಯೊ, ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಪರಾಧ ಪ್ರಕರಣಗಳನ್ನು ವಿಡಿಯೊ ಪ್ರಕಟಿಸಿದವರನ್ನು ಪತ್ತೆ ಮಾಡಿ, ಅವರಿಂದ ದೂರು ಪಡೆದು, ತನಿಖೆ ನಡೆಸುವುದು ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಪೊಲೀಸರ ಗಮನಕ್ಕೆ ತಂದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ವರಿತಗತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.

ದುರದೃಷ್ಟಕರ ಎಂದ ಐಎಎಫ್..!

ಬೆಂಗಳೂರಿನಲ್ಲಿ ನಡೆದ ಘಟನೆಯ ಕುರಿತು ಭಾರತೀಯ ವಾಯು ಪಡೆ ಹೇಳಿಕೆ ನೀಡಿದ್ದು, ನಿನ್ನೆ ಬೆಂಗಳೂರಿನಲ್ಲಿ ಐಎಎಫ್ ಅಧಿಕಾರಿಯೊಬ್ಬರು ಭಾಗಿಯಾಗಿರುವ ಘಟನೆ ಸಂಭವಿಸಿದ್ದು ದುರದೃಷ್ಟಕರ. ಪ್ರಕರಣವನ್ನು ತನಿಖೆ ಮಾಡಲು ಮತ್ತು ಕಾನೂನುಬದ್ಧವಾಗಿ ಪರಿಹರಿಸಲು ಐಎಎಫ್ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News