ತೈಲ ಬೆಲೆ ಏರಿಸುವ ಮೂಲಕ ಕಾಂಗ್ರೆಸ್ ಸರಕಾರ ಜನರ ಕೈಗೆ ಚೊಂಬು ಕೊಟ್ಟಿದೆ : ಪ್ರಹ್ಲಾದ್ ಜೋಶಿ

Update: 2024-06-15 14:55 GMT

ಹುಬ್ಬಳ್ಳಿ: ರಾಜ್ಯದಲ್ಲಿ ಗ್ಯಾರೆಂಟಿ, ಗ್ಯಾರೆಂಟಿ ಎಂದು ಬಾಯಿ ಬಡಿದುಕೊಳ್ಳೋ ಕಾಂಗ್ರೆಸ್ ಸರಕಾರ ಈಗ ತೈಲ ಬೆಲೆ ಏರಿಸುವ ಮೂಲಕ ಜನರ ಕೈಗೆ ಅಕ್ಷರಶಃ ಚೊಂಬು ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ಜನರ ದಿಕ್ಕು ತಪ್ಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಈಗ ರಾಜ್ಯದ ಜನಸಾಮಾನ್ಯರಿಗೆ ತಾನೇ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಕಿಡಿಕಾರಿದರು.

ಕೇಂದ್ರ ಸರಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ. ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನೆ ಕೈಗೊಂಡಿಲ್ಲ. ಈಗ ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಕೈ ಹಾಕಿದೆ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News