ಪ್ರಜ್ವಲ್ ಲೈಂಗಿಕ ಹಗರಣ | ಯಾವ ಕಾರಣಕ್ಕಾಗಿ ಜೆಡಿಎಸ್ ಪ್ರತಿಭಟನೆ : ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ಲೈಂಗಿಕ ಹಗರಣದಂತಹ ಸೂಕ್ಷ್ಮ ವಿಚಾರವನ್ನು ಜನತಾದಳದವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ, ಯಾವ ಸಾಧನೆ ಮಾಡಿದ್ದಾರೆ ಎಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕಾರಣ ಮಾಡಲು ಜನತಾದಳದವರು ಹೊರಟಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯ ಪ್ರವೇಶ ಮಾಡಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ. ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಆರೋಪಿಯೆ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೆ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲು ಅವರೇನು ಕೋಳಿ ಮರಿಯೇ? ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅವರು ತಾವೇ ಉನ್ನತಮಟ್ಟದ ವ್ಯಕ್ತಿ ಎಂದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಕಿಡಿಗಾರಿದರು.
ದೇವರಾಜೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಬಿಜೆಪಿ ನಾಯಕರಾಗಿರುವ ಕಾರಣಕ್ಕೆ ಫೋನ್ ನೀಡಿದಾಗ ಶಿವಕುಮಾರ್ ಮಾತನಾಡಿದ್ದಾರೆ. ಒಕ್ಕಲಿಗ ಸಮಾಜವನ್ನು ಈ ವಿಚಾರದಲ್ಲಿ ಎಳೆದು ತರುವುದು ಒಳ್ಳೆಯದಲ್ಲ. ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು, ನಿಮ್ಮನ್ನು ಬೆಂಬಲಿಸುತ್ತದೆ. ಆದರೆ ಎಲ್ಲವೂ ನಮ್ಮದೇ ಹಿಡಿತದಲ್ಲಿ ಇದೆ ಎಂದು ಭಾವಿಸುವುದು ತಪ್ಪು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕುಮಾರಸ್ವಾಮಿ ನಮ್ಮ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೂ ಬರುತ್ತದೆ. ಶ್ರೇಯಸ್ ಪಟೇಲ್ ಜೊತೆ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಫೋಟೋ ತೆಗೆಸಿಕೊಂಡಿದ್ದನ್ನೆ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮ ಜೊತೆ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅವರ ಪೂರ್ವಾಪರ ತಿಳಿದುಕೊಂಡು ಫೋಟೋ ತೆಗೆಸಿಕೊಳ್ಳಲು ಆಗುತ್ತದೆಯೇ? ಎಂದು ಚಲುವರಾಯಸ್ವಾಮಿ ಹೇಳಿದರು.
ಇಂತಹ ಘಟನೆಗಳು ನಡೆದಾಗ ಅಧಿಕಾರದಲ್ಲಿ ಯಾವುದೇ ಸರಕಾರ ಇದ್ದರೂ ತನಿಖೆ ನಡೆಸಬೇಕಾಗಿರುವುದು ಕರ್ತವ್ಯ. ಆಡಳಿತ ಪಕ್ಷ ನೇಮಿಸಿರುವ ತನಿಖಾ ತಂಡವನ್ನು ವಿರೋಧ ಪಕ್ಷ ಒಪ್ಪಬೇಕು ಎಂದೇನಿಲ್ಲ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುವ ಕಾಲ ದೂರವಾಗಿದೆ ಎಂದು ಅವರು ತಿಳಿಸಿದರು.
ಎಸ್‍ಐಟಿ ವ್ಯವಸ್ಥೆ ಸರಿಯಿಲ್ಲ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜನತಾದಳದ ಮಿತ್ರರು ಹೇಳುತ್ತಿದ್ದಾರೆ. ಇನ್ನೂ ತನಿಖೆಯ ಪ್ರಾರಂಭದಲ್ಲೇ ತನಿಖೆ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ತನಿಖೆ ಒಂದು ಹಂತಕ್ಕೆ ಹೋಗುವ ತನಕ ಬೀದಿಗೆ ಬಂದು ಮಾತನಾಡುವ ವಿಚಾರ ಇದಲ್ಲ ಎಂದು ಅವರು ಹೇಳಿದರು.
ಮುಜುರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇದು ಹೊಳೆನರಸೀಪುರಕ್ಕೆ ಸಂಬಂಧಿಸಿದ ವಿಚಾರ. ಕಾರ್ತಿಕ್, ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ನಡುವೆ ನಡೆದ ಜಗಳದಿಂದ ಆಚೆ ಬಂದ ವಿಚಾರ. ಇಂತಹ ಸಂಧರ್ಭದಲ್ಲಿ ರೇವಣ್ಣ, ಕುಮಾರಸ್ವಾಮಿ ಪ್ರಜ್ವಲ್ ಗೆ ಬಂಧನಕ್ಕೆ ಒಳಗಾಗು ಎಂದು ಕಿವಿ ಮಾತು ಹೇಳಬೇಕಾಗಿತ್ತು ಎಂದರು.
ದೇವರಾಜೇಗೌಡ ಅನೇಕ ದಿನಗಳಿಂದ ವಿಡಿಯೋ ವಿಚಾರದಲ್ಲಿ ಆರೋಪ ಮಾಡುತ್ತಲೇ ಬಂದಿದ್ದರು. ಎಸ್‍ಐಟಿಯನ್ನು ಅವರು ಸಹ ಸ್ವಾಗತ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಹೆಸರನ್ನು ಯಾಕೆ ಎಳೆದು ತಂದರೋ ಗೊತ್ತಿಲ್ಲ. ಅಶೋಕ್ ಪದೇ, ಪದೇ ಒಕ್ಕಲಿಗ ಸಮುದಾಯವನ್ನು ಎಳೆದು ತರುತ್ತಿರುವುದು ಸೂಕ್ತವಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ದೇವರಾಜೇಗೌಡ ಕಳೆದ ಒಂದು ವರ್ಷದಿಂದ ಅನೇಕ ಹೇಳಿಕೆಗಳನ್ನು ನೀಡಿದ್ದಾನೆ. ಎಸ್‍ಐಟಿ ತನಿಖೆ ಪ್ರಾರಂಭ ಆದ ಕಾರಣಕ್ಕೆ ಆತನಿಗೆ ತೊಂದರೆಯಾಗುತ್ತದೆ ಎಂದು ಗೊತ್ತಾಗಿ ಈಗ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಎಸ್‍ಐಟಿ ಸತ್ಯವನ್ನು ಹೊರಗೆ ತರುತ್ತದೆ. ಅಲ್ಲದೇ ಸಿಬಿಐ ಗೆ ಈ ಪ್ರಕರಣ ಹೋದರೆ ಕೋಲ್ಡ್ ಸ್ಟೋರೇಜ್‍ಗೆ ಸೇರುತ್ತದೆ. ಇಂತಹ ಹೀನ ಕೆಲಸ ನಮ್ಮ ಜಾತಿಯವರಿಂದ ಆಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಸಂಶೋಧನಾ ವಿಭಾಗದ ಪ್ರೊ.ಎಂ.ವಿ.ರಾಜೀವ್ ಗೌಡ, ಶಾಸಕರಾದ ರಮೇಶ್ ಬಾಬು ಬಂಡ್ಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ವಕ್ತಾರೆ ತೇಜಸ್ವಿನಿ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಭಾಗವಹಿಸಿದ್ದರು.