ಪ್ರಜ್ವಲ್ ಲೈಂಗಿಕ ಹಗರಣ | ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲೇಬೇಕು : ಸಚಿವ ಕೃಷ್ಣ ಬೈರೇಗೌಡ

Update: 2024-05-09 14:47 GMT

ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲೇಬೇಕು ಎಂಬುದು ನಮ್ಮ ಸರಕಾರದ ಅತ್ಯಂತ ಸ್ಪಷ್ಟವಾದ ನಿಲುವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ಸಿಬಿಐ, ಈಡಿ ಹಾಗೂ ಆದಾಯ ತೆರಿಗೆ ಇಲಾಖೆಯವರು ಏನು ಮಾಡುತ್ತಿದ್ದಾರೆ ಎಂದು ಇಡೀ ದೇಶದ ಜನರಿಗೆ ಗೊತ್ತಿದೆ. ಈ ಪ್ರಕರಣ ಮುಚ್ಚಿ ಹಾಕಲು ಸಿಬಿಐ ತನಿಖೆಗೆ ವಹಿಸಬೇಕೇ?" ಎಂದು ಪ್ರಶ್ನಿಸಿದರು.

ಕೇಂದ್ರ ಬಿಜೆಪಿ ಸರಕಾರದಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಪೈಕಿ ಯಾರಿಗಾದರೂ ಶಿಕ್ಷೆ ಕೊಡುವ ಕೆಲಸ ಈ ಸಂಸ್ಥೆಗಳು ಮಾಡಿವೆಯೇ?. ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಸ್ಕಿ ದೇಶ ಬಿಟ್ಟು ಹೋಗಿ ಎಷ್ಟು ದಿನಗಳಾಗಿವೆ. ಲಂಡನ್‍ನಲ್ಲಿ ಅವರ ಜಾಮೀನು ಅರ್ಜಿ ತಿರಸ್ಕೃತವಾಗಿದ್ದರೂ ಅವರನ್ನು ದೇಶಕ್ಕೆ ವಾಪಸ್ ಕರೆತರಲು ಆಗಿಲ್ಲ ಇವರಿಗೆ ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.

ಅದೇ ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇವೆ. ಯಾವುದರಲ್ಲಿ ಯಾರಿಗೆ ನ್ಯಾಯ ಸಿಕ್ಕಿದೆ. ಸಿಬಿಐ, ಈಡಿ, ಆದಾಯ ತೆರಿಗೆ ಇಲಾಖೆಯವರು ವಾಷಿಂಗ್ ಮಷಿನ್‍ಗಳಂತೆ ಕೆಲಸ ಮಾಡುತ್ತಿವೆ. ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ವಿರೋಧ ಪಕ್ಷಗಳ ಮೇಲೆ ಹಿಡಿತ ಸಾಧಿಸಲು ಈ ಸಂಸ್ಥೆಗಳು ಏಜೆನ್ಸಿಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ದೂರಿದರು.

ಪೊಲೀಸರು ಯಾವುದಾದರೂ ದೂರು ದಾಖಲು ಮಾಡಲು ಹಿಂದೇಟು ಹಾಕಿದರೆ ನ್ಯಾಯಾಲಯದ ಮೊರೆ ಹೋಗಿ ಅಲ್ಲಿಂದ ಪೊಲೀಸರಿಗೆ ನಿರ್ದೇಶನ ಕೊಡಿಸಲು ಕಾನೂನಿನಲ್ಲಿ ಅವಕಾಶವಿದೆ. ನಮ್ಮ ವಿರುದ್ಧ ಅನಗತ್ಯ ಆಪಾದನೆಗಳು ಮಾಡುವವರು ನ್ಯಾಯಾಲಯದ ಮೊರೆ ಹೋಗಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಯಾರೆ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಕೃಷ್ಣ ಬೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News