ʼಜಾತಿಗಣತಿʼ ಬಗ್ಗೆ ಆರ್.ಅಶೋಕ್ ಅಪಪ್ರಚಾರ ನಿಲ್ಲಿಸಬೇಕು : ಪ್ರಿಯಾಂಕ್ ಖರ್ಗೆ

Update: 2025-04-21 21:05 IST
ʼಜಾತಿಗಣತಿʼ ಬಗ್ಗೆ ಆರ್.ಅಶೋಕ್ ಅಪಪ್ರಚಾರ ನಿಲ್ಲಿಸಬೇಕು : ಪ್ರಿಯಾಂಕ್ ಖರ್ಗೆ

ಅಶೋಕ್/ಪ್ರಿಯಾಂಕ್‌ ಖರ್ಗೆ

  • whatsapp icon

ಬೆಂಗಳೂರು : ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜಾತಿಗಣತಿ ವರದಿ ಅಸಲಿಯಲ್ಲ, ನಕಲಿ ಎಂದು ಆರೋಪಿಸುತ್ತಿದ್ದಾರೆ. ಈ ಅಪಪ್ರಚಾರವನ್ನು ನಿಲ್ಲಿಸಿ, ವರದಿಯನ್ನು ತರೆಸಿಕೊಂಡು ಪರಿಶೀಲನೆ ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಗೆ ಯಾರ ಸಹಿಯನ್ನು ಹಾಕಲಾಗಿದೆ ಎಂದು ಬಿಜೆಪಿಯವರು ಪರಿಶೀಲನೆ ಮಾಡಬೇಕು. ಜಾತಿಗಣತಿ ವರದಿಯನ್ನು ಸಲ್ಲಿಸುವಾಗ ದತ್ತಾಂಶಗಳ ಅಧ್ಯಯನ ವರದಿಗೆ ಹಿಂದುಳಿದ ವರ್ಗಗಳ ಆಯೋಗದಲ್ಲಿದ್ದ ಕೆ. ಜಯಪ್ರಕಾಶ ಹೆಗ್ಡೆ, ಎಚ್.ಎಸ್. ಕಲ್ಯಾಣ ಕುಮಾರ್, ಬಿ.ಎಸ್. ರಾಜಶೇಖರ್, ಕೆ.ಟಿ. ಸುವರ್ಣ, ಅರುಣ ಕುಮಾರ್, ಶಾರದಾ ನಾಯ್ಕ, ಕೆ.ಎ. ದಯಾನಂದ ಸಹಿ ಹಾಕಿದ್ದಾರೆ. ಅವರು ಕಾಂಗ್ರೆಸ್ ಸರಕಾರದಲ್ಲಿ ನೇಮಕವಾದವರೇ? ಅವರೆಲ್ಲರನ್ನು ಬಿಜೆಪಿ ಸರಕಾರವೇ ನಾಮನಿರ್ದೇಶನ ಮಾಡಿದೆ ಎಂದರು.

ಜಾತಿ ಗಣತಿಗೆ ಸಂಬಂದಿಸಿ ಎಲ್ಲ ದತ್ತಾಂಶಗಳ ವರದಿಗೆ ಬಿಜೆಪಿ ಸರಕಾರ ನೇಮಿಸಿದವರೇ ಸಹಿಯನ್ನು ಹಾಕಿ ಸರಕಾರಕ್ಕೆ ವರದಿ ನೀಡಿದ್ದಾರೆ. ಆದರೆ ಇಂದು ಜಾತಿಗಣತಿ ವರದಿ ಕ್ಯಾಬಿನೆಟ್‍ಗೆ ಹೋಗುತ್ತಿದ್ದಂತೆ ವರದಿ ಸುಳ್ಳು ಎಂದು ವಿರೋಧ ಪಕ್ಷದ ನಾಯಕರು ಸೇರಿ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಹಾಗಾದರೆ ಬಿಜೆಪಿಯವರು ತಾವು ನೇಮಕ ಮಾಡಿದ ಸದಸ್ಯರನ್ನು ಕರೆದು ಏಕೆ ಸಹಿ ಹಾಕಿದ್ದೀರಿ ಎಂದು ಕೇಳಬಹುದಲ್ಲವೇ ಎಂದು ಸಚಿವರು ಪ್ರಶ್ನಿಸಿದರು.

ಜಾತಿಗಣತಿ ವರದಿಯನ್ನು ತಯಾರು ಮಾಡಲು ಸರ್ವೇಯನ್ನು ಮಾಡಲಾಗಿದೆ. ಇಂದು ಜಾತಿಗಣತಿ ವರದಿಯನ್ನು ಕ್ಯಾಬಿನೆಟ್‍ಗೆ ತರಲಾಗಿದೆ. ಅಂಕಿ-ಅಂಶಗಳು ಸರಿ ಇದೆಯೇ ಎಂದು ಕ್ಯಾಬಿನೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಪಡೆಯಲು ಕೆಲ ಕಾಲಾವಕಾಶವನ್ನೂ ನೀಡಲಾಗಿದೆ. ಸಮಾಜದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಲಿಖಿತ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಆದರೆ ಜಾತಿಗಣತಿ ವಿಚಾರದಲ್ಲಿ ಬಿಜೆಪಿ ಏಕೆ ಆತುರದಲ್ಲಿದೆ ಎಂದು ತಿಳಿಯುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜಾತಿಗಣತಿ ವರದಿಯ ಎಲ್ಲ ದತ್ತಾಂಶಗಳು ಜಿಲ್ಲಾಮಟ್ಟದ ಅಧಿಕಾರಗಳ ಬಳಿ ಇದೆ. ವಿರೋಧ ಪಕ್ಷದ ನಾಯಕರು ಅದನ್ನು ಪರಿಶೀಲಿಸಬಹುದು. ಒಂದು ವೇಳೆ ಅದರಲ್ಲಿ ಲೋಪಗಳಿದ್ದರೆ ಸರಕಾರಕ್ಕೆ ತಿಳಿಸಬೇಕು. ಅದನ್ನು ಬಿಟ್ಟು ವರದಿಯ ಬಗ್ಗೆ ಹೀಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಜಾತಿಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಿಲುವು ಏನು ಎಂದು ಮೊದಲು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News