ಬರ ಪರಿಹಾರ ನೀಡುವಲ್ಲಿ ಕೇಂದ್ರದಿಂದ ಅನ್ಯಾಯ; ರಾಜ್ಯ ಸರ್ಕಾರದಿಂದ ಪ್ರತಿಭಟನೆ

Update: 2024-04-28 13:39 GMT

ಬೆಂಗಳೂರು : ‘ಕೇಂದ್ರ ಸರಕಾರ ಅಲ್ಪ ಪ್ರಮಾಣದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರವಿವಾರ ನಗರದ ವಿಧಾನಸೌಧದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ‘ಖಾಲಿ ಚೊಂಬು’ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬರ ಪರಿಹಾರ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಕಾನೂನು ಪ್ರಕಾರವೂ ನಡೆದುಕೊಂಡಿಲ್ಲ. ಅನಿವಾರ್ಯವಾಗಿ ನಾವು ಕೋರ್ಟ್‍ಗೆ ಹೋಗಬೇಕಾಯಿತು. ನಾವೇನೂ ಭಿಕ್ಷೆ ಕೇಳುತ್ತಿಲ್ಲ. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಈಗ 3 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಇದು ಬಹಳ ಕಡಿಮೆ ಪರಿಹಾರ ಮೊತ್ತ. ಬರ ಪರಿಹಾರ ವಿಚಾರದಲ್ಲಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದಾರೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ಇದರ ಜೊತೆಗೆ ಈಗ ಜೆಡಿಎಸ್ ಸಹ ಸೇರಿಕೊಂಡಿದೆ. ಈಗ ಶೇ.19ಕ್ಕಿಂತ ಕಡಿಮೆ ಹಣ ಕೊಟ್ಟಿದ್ದಾರೆ. ಇದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆಂದು ವಿವರಣೆ ನೀಡಿದರು.

ಇನ್ನೂ 14,718 ಕೋಟಿ ಬಾಕಿ ಇದೆ. ನಾವು ರೈತರಿಗಾಗಿ ಹಣ ಕೇಳಿದ್ದೇವೆಯೇ ಹೊರತು ಗ್ಯಾರಂಟಿಗೆ ಅಲ್ಲ. ನಾವು ಸಂಗ್ರಹಿಸಿಕೊಟ್ಟ ತೆರಿಗೆಯಲ್ಲಿ ನಮಗೆ ಸರಿಯಾದ ಪಾಲು ನೀಡುವುದು ಮತ್ತು ರೈತರಿಗೆ ಪರಿಹಾರ ನೀಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಪ್ರಧಾನಿ ಮೋದಿ, ಅಮಿತ್ ಶಾರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಆದರೆ, ರೈತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ನಮ್ಮ ಸಂಪುಟ ಸಚಿವರು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದೆವು. ಕೊನೆಗೆ ಅನ್ಯಮಾರ್ಗ ಇಲ್ಲದೆ ಸುಪ್ರೀಂ ಕೋರ್ಟ್‍ಗೆ ಹೋದೆವು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ಈಗ ಕೇಳಿದ ಪರಿಹಾರದ ಪೈಕಿ ಶೇ.20ರಷ್ಟು ಮಾತ್ರ ಕೊಟ್ಟಿದ್ದಾರೆ. ಈ ಲಾಲಿಪಾಪ್ ಅನ್ನು ಮೋದಿ ಕೊಟ್ಟಿದ್ದಾರೆ. ಎನ್‍ಡಿಆrf ಎಫ್ ಹಣ ರಾಜ್ಯದ ಜನರ ಹಣ. ನಮಗೆ 18,172 ಕೋಟಿ ರೂ.ಕೊಡಬೇಕು. ಹಾಗಾದರೆ ಮಾತ್ರ ಬರಕ್ಕೆ ಪರಿಹಾರ ನೀಡಿದಂತಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಡಾ.ಎಂ.ಸಿ.ಸುಧಾಕರ್, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಕೇಂದ್ರದ ವಿರುದ್ಧ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಪ್ರಧಾನಿ ಮೋದಿ ವಿರುದ್ಧ ‘ಖಾಲಿ ಚೊಂಬು ಕೊಟ್ಟ ಪಾರ್ಟಿ ಬಿಜೆಪಿ, ಚೊಂಬೇಶ್ವರ ಮೋದಿ’, ‘ಗೋ ಬ್ಯಾಕ್  ಮೋದಿ ’ ಎಂದು ಧಿಕ್ಕಾರ ಕೂಗಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News