ಸ್ವಾಮೀಜಿಯವರನ್ನು ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ : ಆರ್.ಅಶೋಕ್‌ ಎಚ್ಚರಿಕೆ

Update: 2024-11-29 12:22 GMT

ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸರಕಾರ ಮುಟ್ಟಲು ಬಂದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಸ್ವಾಮೀಜಿಯವರಿಗೆ ಧೈರ್ಯ ಹೇಳಿದ್ದೇವೆ ಹಾಗೂ ಒಕ್ಕಲಿಗ ಸಮಾಜದೊಂದಿಗೆ ನಾವಿದ್ದೇವೆ ಎಂದು ಹೇಳಿದ್ದೇವೆ. ವಕ್ಫ್ ಮಂಡಳಿ ಹಿಂದೂಗಳ, ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ನುಂಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಪಹಣಿ ಬದಲಿಸಲಾಗುತ್ತಿದೆ. ಹಿಂದೂಗಳಿಗಾಗುತ್ತಿರುವ ಅನ್ಯಾಯದ ವಿರುದ್ಧ ಅವರು ಮಾತನಾಡಿದ್ದು, ಬಳಿಕ ಅದರಲ್ಲಿ ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಇಷ್ಟಾದರೂ ಒಬ್ಬ ಮತಾಂಧ ದೂರು ನೀಡಿದ್ದಕ್ಕೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರೆ ಸರಕಾರಕ್ಕೆ ಎಷ್ಟು ಧೈರ್ಯ ಇದೆ" ಎಂದು ಪ್ರಶ್ನಿಸಿದರು.

"ಅಸಾದುದ್ಧೀನ್ ಓವೈಸಿ ದೇಶಕ್ಕೆ ಬೆದರಿಕೆ ಹಾಕುತ್ತಾರೆ. ಆಂಧ್ರಪ್ರದೇಶದಲ್ಲಿ ಮೌಲ್ವಿ ಸರಕಾರಕ್ಕೆ ಬೆದರಿಕೆ ಹಾಕುತ್ತಾನೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆ ಕೊಡಲ್ಲ ಎಂದು ಕೆಲವರು ಹೇಳುತ್ತಾರೆ. ದೇವೇಗೌಡರನ್ನೇ ಖರೀದಿ ಮಾಡುತ್ತೇನೆಂದು ಸಚಿವ ಝಮೀರ್ ಹೇಳಿದ್ದರು. ಆದರೆ ಸರಕಾರ ಅದರ ವಿರುದ್ಧ ಕ್ರಮ ವಹಿಸಿಲ್ಲ. ಒಕ್ಕಲಿಗರ ವಿರುದ್ಧ ಕಾಂಗ್ರೆಸ್ ದ್ವೇಷ ಸಾಧಿಸುವುದು ಹೇಯ. ಸರಕಾರ ಸ್ವಾಮೀಜಿಯವರನ್ನು ಮುಟ್ಟುವ ಕೆಲಸ ಮಾಡಿದರೆ ಇಡೀ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ" ಎಂದು ಎಚ್ಚರಿಕೆ ನೀಡಿದರು.

ʼಸ್ವಾಮೀಜಿಯವರಿಗೆ ತಿಳಿ ಹೇಳುವ ಬದಲು ಪೊಲೀಸರು ನೋಟಿಸ್ ನೀಡಿದ್ದಾರೆ. ಈಗ ಒಕ್ಕಲಿಗ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ. ಸಮುದಾಯದ ವಿರುದ್ಧ ಸರಕಾರ ಈ ರೀತಿ ದ್ವೇಷ ಕಾರುತ್ತಿರುವುದನ್ನು ಸಮುದಾಯದ ಜನರು ಗಮನಿಸಬೇಕಿದೆ. ಸ್ವಾಮೀಜಿಗೆ ಕಿರುಕುಳ ನೀಡಿದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News