ಜಾತಿಗಣತಿ | ಸಚಿವ ಸಂಪುಟದಲ್ಲಿ ಪರಸ್ಪರ ವಿಶ್ವಾಸದ ಕೊರತೆ ಇದೆಯೇ? : ಆರ್.ಅಶೋಕ್
ಸಿದ್ದರಾಮಯ್ಯ/ಆರ್.ಅಶೋಕ್
ಬೆಂಗಳೂರು : ‘ಜಾತಿ ಜನಗಣತಿ ವರದಿ ಬಗ್ಗೆ ಎಲ್ಲ ಸಚಿವರಿಗೂ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆಂಬ ಸುದ್ದಿ ಇದೆ. ಹಾಗಾದರೆ ಸಚಿವ ಸಂಪುಟದಲ್ಲಿ ಪರಸ್ಪರ ವಿಶ್ವಾಸದ ಕೊರತೆ ಇದೆಯೇ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘10ವರ್ಷಗಳ ಹಿಂದೆ ಆರಂಭವಾದ ಸಿದ್ದರಾಮಯ್ಯನವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ. ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಜನಗಣತಿ ವರದಿಯನ್ನ ಮುನ್ನೆಲೆಗೆ ತಂದಿರುವ ಸಿದ್ದರಾಮಯ್ಯನವರು ತಮ್ಮ ಸರಕಾರದ ವಿರುದ್ಧ ಎದ್ದಿರುವ ಜನಾಕ್ರೋಶದ ಜ್ವಾಲೆ ಕಡಿಮೆಯಾಗುವ ತನಕ ಜಾತಿ ಜನಗಣತಿ ಜಪ ಮಾಡುತ್ತಲೇ ಇರುವ ನಿರ್ಧಾರ ಮಾಡಿದಂತಿದೆ’ ಎಂದು ಟೀಕಿಸಿದ್ದಾರೆ.
‘ಅಸಲಿಗೆ ಇಂದಿನ ವಿಶೇಷ ಸಚಿವ ಸಂಪುಟ ಸಭೆಯಿಂದ ಸಾಧಿಸಿದ್ದಾದರೂ ಏನು?. ಜಾತಿ ಜನಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಅಂದರೆ ಅದಕ್ಕೆ ಕಾರಣವೇನು?. ಲಿಖಿತ ರೂಪದಲ್ಲಿ ಉತ್ತರ ಪಡೆದುಕೊಳ್ಳುವುದರ ಹಿಂದೆ ಸಚಿವರನ್ನು ಬ್ಲಾಕ್‍ಮೇಲ್ ಮಾಡುವ, ಅವರ ಹೇಳಿಕೆಗಳನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಯಿದಿದೆಯೇ?. ಜಾತಿ ಜನಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ನಡೆಸುವುದರ ಬಗ್ಗೆ ಚರ್ಚೆ ನಡೆಯಿತೇ?’ ಎಂದು ಅಶೋಕ್ ಕೇಳಿದ್ದಾರೆ.
10 ವರ್ಷಗಳ ಹಿಂದೆ ಆರಂಭವಾದ ಸಿಎಂ @siddaramaiah ನವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ.
— R. Ashoka (@RAshokaBJP) April 17, 2025
ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನ… pic.twitter.com/obBKA23qSc