‘ಮುಡಾ’ ಆರೋಪಿಗಳ ಪಾಸ್‍ಪೋರ್ಟ್ ಮುಟ್ಟುಗೊಲಿಗೆ ಆರ್.ಅಶೋಕ್ ಆಗ್ರಹ

Update: 2024-10-19 12:34 GMT

ಬೆಂಗಳೂರು : ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣದ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ, ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು ಹಾಗೂ ಸಂಭವನೀಯ ಸಾಕ್ಷಿದಾರರ ಪಾಸ್‍ ಪೋರ್ಟ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಈ.ಡಿ ನಿರ್ದೇಶಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಈ ಹಗರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಈ.ಡಿ. ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿಗೆ, ತಾಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ.ಡಿ ತನಿಖೆ ಇಷ್ಟೊಂದು ಚುರುಕುಗೊಂಡಿರುವ ಪರಿಸ್ಥಿತಿಯಲ್ಲಿ ಇಡೀ ಪ್ರಕರಣ ಮತ್ತೊಂದು ಮಜಲು ತಲುಪಿದಂತಾಗಿದೆ. ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ, ಈ ಪ್ರಕರಣ ಎಷ್ಟು ಗಂಭೀರವೋ ಅಷ್ಟೇ ಸೂಕ್ಷ್ಮವೂ ಆಗಿದೆ ಎಂದು ಅಶೋಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News