ಜಾತಿಗಣತಿ ಬಗ್ಗೆ ಎಐಸಿಸಿ ಸಭೆಯಲ್ಲಿ ರಾಹುಲ್ ಗಾಂಧಿ ಪ್ರಸ್ತಾಪದ ಬೆನ್ನಲ್ಲೇ ಮಹತ್ವದ ಹೆಜ್ಜೆಯಿಟ್ಟ ಸಿದ್ದರಾಮಯ್ಯ ಸರಕಾರ!

Photo | indianexpress
ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಅಹಮದಾಬಾದ್‌ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಜಾತಿಗಣತಿ ಬಗ್ಗೆ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಜಾತಿಗಣತಿ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದರ ಬೆನ್ನಲ್ಲೇ ಜಾತಿಗಣತಿ ಮತ್ತೆ ಮುನ್ನಲೆಗೆ ಬಂದಿದೆ.
ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೇ ಕರ್ನಾಟಕ ಸರಕಾರ ಈ ಬಗ್ಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯ ಪ್ರಮುಖ ಕಾರ್ಯ ಸೂಚಿಗಳಲ್ಲಿ ಜಾತಿ ಗಣತಿಯನ್ನು ಪಟ್ಟಿ ಮಾಡಲಾಗಿದೆ. ಸಭೆಯಲ್ಲಿ ಜಾತಿಗಣತಿ ವರದಿ ಬಗ್ಗೆ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದು ಕಾದು ನೋಡಬೇಕಾಗಿದೆ.
ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರು 2015ರಲ್ಲಿ ಜಾತಿ ಸಮೀಕ್ಷೆಗೆ ಆದೇಶಿಸಿದರು. ಜಾತಿ ಸಮೀಕ್ಷೆಗೆ ಆದೇಶಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಆದರೆ, ಸಮೀಕ್ಷೆಯ ಅಂತಿಮ ವರದಿಯನ್ನು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಫೆಬ್ರವರಿ 2024ರಲ್ಲಿ ಸಲ್ಲಿಸಲಾಯಿತು. ಎಚ್. ಕಾಂತರಾಜ್ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ನಡೆಸಲಾದ 2015ರ ಸಾಮಾಜಿಕ-ಆರ್ಥಿಕ ಮತ್ತು ಶಿಕ್ಷಣ ಸಮೀಕ್ಷೆಯ ವರದಿಯನ್ನು 2024ರ ಫೆಬ್ರವರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಮುಚ್ಚಿದ ಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿದರು.
ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಲಿದೆ ಎಂದು ಅಧಿಕಾರಿಗಳು ಹೇಳಿರುವ ಬಗ್ಗೆ ವರದಿಯಾಗಿದೆ. ವರದಿಯನ್ನು ಸಭೆಯಲ್ಲಿ ಅಂಗೀಕರಿಸಲಾಗುತ್ತಾ? ಉಪ ಸಮಿತಿಗೆ ವರ್ಗಾಯಿಸಲಾಗುತ್ತಾ? ವರದಿಯ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಲಾಗುತ್ತಾ? ಎಂಬ ಬಗ್ಗೆ ಕುತೂಹಲ ಮೂಡಿದೆ.
ಸಿದ್ದರಾಮಯ್ಯ ಅವರು ಈ ಹಿಂದೆ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ವಿರೋಧವನ್ನು ವ್ಯಕ್ತಪಡಿಸಿತ್ತು. ಒಕ್ಕಲಿಗ ಸಮುದಾಯದವರಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಲಿಂಗಾಯತ ಸಮುದಾಯದವರಾದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪಕ್ಷದ ಹೈಕಮಾಂಡ್‌ಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದರಿಂದ ವರದಿ ಬಗ್ಗೆ ಇನ್ನು ಕೂಡ ಯಾವುದೇ ನಿರ್ಧಾರವನ್ನು ತೆಗದುಕೊಳ್ಳಲಾಗಿಲ್ಲ ಎಂದು ಹೇಳಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಈ ಮೊದಲು ಮಾತನಾಡಿ, ನಮ್ಮ ಕೈಗಳನ್ನು ಕಟ್ಟಿಹಾಕಲಾಗಿದೆ. ಈ ಹಂತದಲ್ಲಿ ಈ ವಿಷಯದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಂಪುಟ ಸಭೆಯಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಕಾದು ನೋಡೋಣ ಎಂದು ಹೇಳಿದ್ದರು.
ರಾಹುಲ್ ಗಾಂಧಿ ದೇಶದಲ್ಲಿ ಜಾತಿ ಜನಗಣತಿ ನಡೆಸುವಂತೆ ಮತ್ತೆ ಧ್ವನಿ ಎತ್ತಿರುವುದರಿಂದ ವರದಿ ಬಗ್ಗೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುವಾಗ ರಾಜಕೀಯ ಸೂಕ್ಷ್ಮ ವಿಚಾರವನ್ನು ಪರಿಗಣಿಸುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ.
ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿ ವೈಜ್ಞಾನಿಕವಾಗಿಲ್ಲ. ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಜೊತೆಗೆ ಮೂಲ ವರದಿ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂದು ಆರೋಪಿಸಿತ್ತು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿಲ್ಲ. ಆದ್ದರಿಂದ ನಮ್ಮ ಸಮುದಾಯ ಸಮೀಕ್ಷೆಯನ್ನು ವಿರೋಧಿಸುತ್ತದೆ. ನಮ್ಮ ಕಳವಳಗಳು ಇನ್ನೂ ಮುಂದುವರಿದಿದೆ. ಕಳೆದ ಮಹಾಸಭಾ ಸಮಾವೇಶದಲ್ಲಿ ನಾವು ಹೊಸದಾಗಿ ಸಮೀಕ್ಷೆ ಮಾಡುವಂತೆ ಒತ್ತಾಯಿಸಿದೆವು. ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ್ ಖಂಡ್ರೆ ಅವರು ಸಂಪುಟ ಸಭೆಯಲ್ಲಿ ನಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
ಜಾತಿಗಣತಿ ವಿಚಾರದಲ್ಲಿ ಇನ್ನು ಹಿಂಜರಿಯುವುದು ಸಾಧ್ಯವಿಲ್ಲ. ಒಬಿಸಿಗಳಿಗೆ ಅರ್ಹವಾದ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಅವರನ್ನು ತಲುಪಬೇಕು ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೋರ್ವರು ಹೇಳಿದರು. 1990ರ ದಶಕದ ಆರಂಭದಲ್ಲಿ ಮಂಡಲ್ ಆಯೋಗದ ವರದಿ ಬಳಿಕ ಭುಗಿಲೆದ್ದ ಪ್ರತಿಭಟನೆಯಿಂದ ಪಕ್ಷವು ಒಬಿಸಿ ಸಮುದಾಯದ ಬೆಂಬಲವನ್ನು ಕಳೆದುಕೊಂಡಿದೆ ಎಂಬ ಅಂಶವನ್ನು ಅವರು ಪಕ್ಷಕ್ಕೆ ನೆನಪಿಸಿದರು. ಒಬಿಸಿಗಳ ವಿಶ್ವಾಸವನ್ನು ಮರಳಿ ಪಡೆಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಾತಿ ಜನಗಣತಿ ನಡೆಸಿದ ತಕ್ಷಣ ಒಬಿಸಿ ಮೀಸಲಾತಿಯನ್ನು 42% ಕ್ಕೆ ಹೆಚ್ಚಿಸುವ ತೆಲಂಗಾಣ ಸರಕಾರದ ನಿರ್ಧಾರವನ್ನು ಅವರು ಶ್ಲಾಘಿಸಿದರು ಮತ್ತು ಕರ್ನಾಟಕ ಸರಕಾರ ಅದನ್ನು ಅನುಕರಿಸಬೇಕೆಂದು ರಾಹುಲ್ ಗಾಂಧಿ ಬಯಸುತ್ತಾರೆ ಎಂದು ಹೇಳಲಾಗಿದೆ.