ಫೆ.27 ಕ್ಕೆ ರಾಜ್ಯಸಭೆಗೆ ಚುನಾವಣೆ : ಬಿಜೆಪಿ ಜೆಡಿಎಸ್ ಮೈತ್ರಿ, ಹೆಚ್ಚಿದ ಕುತೂಹಲ

Update: 2024-01-29 15:49 GMT

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ಘೋಷಿಸಿದ್ದು, ಆ ಪೈಕಿ ಕರ್ನಾಟಕ ರಾಜ್ಯದ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ಕ್ಕೆ ಮತದಾನ ನಡೆಯಲಿದೆ.

ರಾಜ್ಯಸಭೆಯ ಈ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯದ 224 ಮಂದಿ ಶಾಸಕರು ಮತದಾರರಾಗಿದ್ದಾರೆ. ವಿಧಾನಸೌಧದಲ್ಲಿ ಫೆ.27ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನ ಪ್ರತಿನಿಧಿಗಳಾದ ಜಿ.ಸಿ. ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಸೈಯದ್ ನಾಸಿರ್ ಹುಸೇನ್ ಅವರ ಅಧಿಕಾರ ಅವಧಿ 2024ರ ಫೆ.2ಕ್ಕೆ ಕೊನೆಗೊಳ್ಳಲಿದ್ದು, ಇವರಿಂದ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ:

ಫೆಬ್ರವರಿ 8ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಫೆ.15ರಂದು ಕೊನೆಯ ದಿನವಾಗಿದೆ. ಫೆ.16ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆ.20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಕರ್ನಾಟಕದಲ್ಲಿ ಹೇಗಿದೆ ಚುನಾವಣಾ ಲೆಕ್ಕಾಚಾರ?

ರಾಜ್ಯದ 224 ಮಂದಿ ಶಾಸಕರು ಮತದಾನದ ಮೂಲಕ ರಾಜ್ಯಸಭೆಯ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಸದ್ಯದ ಕರ್ನಾಟಕದ ಶಾಸಕರ ಬಲಾಬಲಗಳ ಪ್ರಕಾರ ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕಳೆದ ವಿಧಾನ ಸಭೆಯಲ್ಲಿ ಭರ್ಜರಿ 136 ಸ್ಥಾನಗಳ ಬಹುಮತ ಪಡೆದಿದ್ದರಿಂದ ಮೂರು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಬಿಜೆಪಿ ಹಾಗೂ ಜೆಡಿಎಸ್ ಕ್ರಮವಾಗಿ 66, 19 ಸ್ಥಾನಗಳನ್ನು ಹೊಂದಿದ್ದು, ಎನ್ ಡಿ ಎ ಮೈತ್ರಿಕೂಟ ಒಂದು ಸ್ಥಾನವನ್ನು ಗೆಲ್ಲಬಹುದಾಗಿದೆ. 5 ನೇ ಅಭ್ಯರ್ಥಿಯಾಗಿ ಯಾರಾದರೂ ಕಣಕ್ಕಿಳಿದರೆ ಮಾತ್ರ ಚುನಾವಣೆ ನಡೆಯಲಿದೆ.

ಪಕ್ಷಗಳ ಲೆಕ್ಕಾಚಾರವೇನು?

ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆಯಾದರೆ, 135 ಮತಗಳು ಪೂರ್ಣಗೊಂಡು ಪಕ್ಷದ ಮೂರು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಕಾಂಗ್ರೆಸ್ ನ ಕೇವಲ 1 ಮತ ಮಾತ್ರ ಹೆಚ್ಚುವರಿಯಾಗಿ ಉಳಿಯಲಿದೆ. ಬಿಜೆಪಿಯ 66 ಸ್ಥಾನಗಳ ಪೈಕಿ ಓರ್ವ ಅಭ್ಯರ್ಥಿಗೆ 45 ಮತ ಬಿದ್ದರೆ, ಹೆಚ್ಚುವರಿಯಾಗಿ 21 ಮತಗಳು ಉಳಿಯಲಿವೆ. ಜೆಡಿಎಸ್ ಬಳಿ 19 ಮತಗಳು ಇವೆ. ಜೆಡಿಎಸ್ ಎನ್ ಡಿ ಎ ಮೈತ್ರಿಕೂಟಕ್ಕೆ ಸೇರಿರುವುದರಿಂದ ಬಿಜೆಪಿಗೆ ವರದಾನವಾಗಲಿದೆ. ಜೆಡಿಎಸ್ ನ ಮತಗಳನ್ನು ಮೈತ್ರಿ ಪಕ್ಷಗಳು ಬಳಸಿಕೊಂಡು, ಬಿಜೆಪಿಯ ಮೊದಲ ಅಭ್ಯರ್ಥಿಯನ್ನು ಗೆಲ್ಲಿಸಿ ಜೆಡಿಎಸ್ 19 ಮತಗಳ ಬೆಂಬಲದೊಂದಿಗೆ 2ನೇ ಅಭ್ಯರ್ಥಿ ಗೆಲುವಿಗಾಗಿ ರಾಜಕೀಯ ಚದುರಂಗದಾಟ ನಡೆಯುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News