ಸಾರಿಗೆ ಸಿಬ್ಬಂದಿಗಳ ಅವಲಂಬಿತರ ಆರ್ಥಿಕ ಭದ್ರೆತೆಗಾಗಿ ‘ಸಾರಿಗೆ ಸುರಕ್ಷಾ’ ಯೋಜನೆ : ರಾಮಲಿಂಗಾರೆಡ್ಡಿ

ಬೆಂಗಳೂರು : ಸಾರಿಗೆ ಸಿಬ್ಬಂದಿ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ. ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಉದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶನಿವಾರ ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ, ನಿಗಮದ ವಿವಿಧ ಪರಿಹಾರ ಯೋಜನೆಯಡಿ ಸಿಬ್ಬಂದಿ ಹಾಗೂ ಅವಲಂಭಿತರಿಗೆ ಪರಿಹಾರ ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಅವರು, ಸಾರಿಗೆ ಸಿಬ್ಬಂದಿ ಹಗಲು ಇರಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಉನ್ನತ ಸ್ಥಾನದಲ್ಲಿದೆ. ಮೃತ ಸಿಬ್ಬಂದಿ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ಈಗಾಗಲೇ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1,000 ಉದ್ಯೋಗ ನೀಡಿರುವುದಾಗಿ ತಿಳಿಸಿದರು.
ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡಬಾರದು. ಹಣವಿದ್ದರೆ ಎಲ್ಲರು ನೆಂಟರೆ ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಕೆಎಸ್ ಆರ್‌ಟಿಸಿ ಆರೋಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು, ರಾಜ್ಯಾದಾದ್ಯಂತ 300ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದ್ದು, ಈವರೆಗೂ 56,000ಕ್ಕೂ ಹೆಚ್ಚು ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ನೀಡಿದರು.
ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡು ಕಾಲು ಕಳೆದುಕೊಂಡ ಸಿಬ್ಬಂದಿಗೆ ಪ್ರಪ್ರಥಮ ಬಾರಿಗೆ ರೂ.25 ಲಕ್ಷ ರೂ., ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ.ದಂತೆ ಇಬ್ಬರಿಗೆ ರೂ.2 ಕೋಟಿ ಪರಿಹಾರ, ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿ ಅವಲಂಬಿತರಿಗೆ ತಲಾ ರೂ.10 ಲಕ್ಷ ರೂ. ದಂತೆ ರೂ.3.10 ಕೋಟಿ ರೂ. ಪರಿಹಾರವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್.ವಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್, ಡಾ.ನಂದಿನಿದೇವಿ ಮತ್ತಿತರರು ಉಪಸ್ಥಿತರಿದ್ದರು.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ‘ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವೊಂದುವ ನೌಕರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಪರಿಹಾರ ಮೊತ್ತವಾದ 3 ಲಕ್ಷ ರೂ.ಗಳನ್ನು ನವೆಂಬರ್ 2023 ರಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದುವರೆಗೂ 94 ಪ್ರಕರಣಗಳಲ್ಲಿ ತಲಾ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಿದ್ದು, ನಂತರದಲ್ಲಿ ಕಾಯಿಲೆಗಳಿಂದ ಮರಣ ಹೊಂದಿದ 31 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್‍ನ್ನು ಇಂದು ವಿತರಿಸಲಾಯಿತು. ಈವರೆಗೂ 125 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟು 12.50 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ