ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಸೇರಿ 6 ಮಂದಿ ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿದರೆ, ದರ್ಶನ್ ಆಪ್ತೆ ಪವಿತ್ರಾಗೌಡ ಸೇರಿ ಉಳಿದ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಜೈಲಿಗೆ ನ್ಯಾಯಾಂಗ ಬಂಧನ ವಿಧಿಸಿ ನಗರದ 24ನೆ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಬಂಧಿತ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಗುರುವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ನಟ ದರ್ಶನ್, ವಿನಯ್, ಪ್ರದೋಷ್, ಮತ್ತು ಧನರಾಜ್ ಎಂಬ ನಾಲ್ವರನ್ನು ಮತ್ತಷ್ಟು ವಿಚಾರಣೆಗಾಗಿ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು.
ಬಳಿಕ ಪ್ರಕರಣದ ಉಳಿದ ಆರೋಪಿಗಳಾದ ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ರವಿಶಂಕರ್, ನಾಗರಾಜ್, ಲಕ್ಷ್ಮಣ್ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಇನ್ನು ಪ್ರಕರಣದಲ್ಲಿ ಬಂಧಿತರಾಗಿದ್ದ ಕಾರ್ತಿಕ್, ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ದೀಪಕ್ ಎಂಬುವರು ಈಗಾಗಲೇ ಜೈಲಿನಲ್ಲಿದ್ದಾರೆ. ಜೂ.11ರಿಂದ ಹತ್ತು ದಿನಗಳ ಕಾಲ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದರು. ಈಗಾಗಲೇ ವಿಜಯನಗರ ಉಪವಿಭಾಗದ ಪೊಲೀಸರು ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಬೆಂಗಳೂರು, ಮೈಸೂರು, ಚಿತ್ರದುರ್ಗ ಇನ್ನೂ ಕೆಲವು ಕಡೆಗಳಲ್ಲಿ ಕರೆದೊಯ್ದು ಮಹಜರು ಮಾಡಿದ್ದಾರೆ. ಈವರೆಗೆ ಸುಮಾರು 118 ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವರ ಹೇಳಿಕೆಗಳನ್ನು ಸಹ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ನಟ ದರ್ಶನ್, ವಿನಯ್, ಪ್ರದೋಷ್, ಹಾಗೂ ಧನರಾಜ್‍ರನ್ನು ಮತ್ತಷ್ಟು ವಿಚಾರಣೆ ಮತ್ತು ತನಿಖೆ ನಡೆಸಬೇಕಿರುವ ಕಾರಣ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳ ಕುರಿತು ತಕರಾರು ಸಲ್ಲಿಸಿಲ್ಲವಾದ್ದರಿಂದ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆದರೆ, ನಟ ದರ್ಶನ್‍ರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ಸಲ್ಲಿಸಲಾಗಿರುವ ರಿಮ್ಯಾಂಡ್ ಅರ್ಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ರಂಗನಾಥ ರೆಡ್ಡಿ, ಈಗಾಗಲೇ 10 ದಿನಗಳ ಕಾಲ ವಿಚಾರಣೆ ನಡೆದಿರುವ ಬಗ್ಗೆ ಗಮನ ಸೆಳೆದರು. ಅಲ್ಲದೆ, ತಮಗೆ ರಿಮ್ಯಾಂಡಿ ಅರ್ಜಿ ಸಿಗದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ವಾದ ಆರಂಭಿಸಿದ ಸರಕಾರಿ ಪರ ಅಭಿಯೋಜಕ ಪ್ರಸನ್ನಕುಮಾರ್, ಕೊಲೆ ಪ್ರಕರಣದಲ್ಲಿ ಕೆಲ ಆರೋಪಿಗಳ ವಿಚಾರಣೆ ಬಾಕಿಯಿದೆ. ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್ ಇನ್ನೂ ಸಿಕ್ಕಿಲ್ಲ. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಬಳಿ ಬಿಗಿ ಭದ್ರತೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಬಂದಿರುವ ಹಿನ್ನೆಲೆ ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಜೈಲಿನ ಗೇಟ್, ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಮಾಡಲಾಗಿದೆ.