ರೇಣುಕಾಸ್ವಾಮಿ ಹತ್ಯೆ ಪ್ರಕರಣ | ನಟ ದರ್ಶನ್‌ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ

Update: 2024-06-22 14:38 GMT

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇದರಿಂದ 13 ವರ್ಷಗಳ ಬಳಿಕ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಶನಿವಾರ ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಪೊಲೀಸರು ಮತ್ತೆ ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ನಟ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಹಾಗೂ ಇತರರಿಗೆ ಮೂರು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸರಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಅವರು ನಟ ದರ್ಶನ್ ಸೇರಿದಂತೆ ಆರೋಪಿಗಳನ್ನು ಪ್ರತ್ಯೇಕವಾಗಿ ಮತ್ತು ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ದರ್ಶನ್ ಪರ ವಕೀಲರು ವಿರೋಧಿಸಿದರು. ವಕೀಲರುಗಳ ವಾದ ವಿವಾದ ಆಲಿಸಿದ ಬಳಿಕ ದರ್ಶನ್ ಮತ್ತು ಅವರ ಸಹಚರರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

ಈ ಹಿಂದೆ 2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿಗೆ ನಟ ಜೈಲಿಗೆ ಸೇರಿದ್ದಾರೆ.

ದರ್ಶನ್ ಸ್ನೇಹಿತೆ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.11ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಜೂ.11ರಿಂದ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದರು. ಮೂರು ದಿನಗಳ ಹಿಂದೆ ಎ.1 ಆರೋಪಿ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸದ್ಯ ಮತ್ತೆ ಕಸ್ಟಡಿಯಲ್ಲಿದ್ದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ದರ್ಶನ್ ಕೈದಿ ನಂ. 6106: ಕೊಲೆ ಪ್ರಕರಣದಡಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‍ಗೆ ಜೈಲು ಅಧಿಕಾರಿಗಳು ವಿಚಾರಣಾಧೀನ ಕೈದಿ ಸಂಖ್ಯೆ 6106 ಅನ್ನು ನೀಡಿದ್ದು, ಹೆಚ್ಚಿನ ಭದ್ರತೆಯ ದೃಷ್ಠಿಯಿಂದ ಜೈಲಿನ ಬಿ ಬ್ಯಾರಕ್‍ನಲ್ಲಿ ದರ್ಶನ್‍ಗೆ ವ್ಯವಸ್ಥೆ ಮಾಡಲಾಗಿದೆ. ಎ9 ಆರೋಪಿ ಧನರಾಜ್‍ಗೆ ವಿಚಾರಣಾಧೀನ ಕೈದಿ ಸಂಖ್ಯೆ 6107, ಎ10 ಆರೋಪಿ ವಿನಯ್ ವಿಚಾರಣಾಧೀನ ಕೈದಿ ಸಂಖ್ಯೆ 6108, ಎ14 ಆರೋಪಿ ಪ್ರದೋಶ್‍ಗೆ ವಿಚಾರಣಾಧೀನ ಕೈದಿ ಸಂಖ್ಯೆ 6109 ಅನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿ ಬಿಗಿ ಭದ್ರತೆ: ಪರಪ್ಪನ ಅಗ್ರಹಾರ ಜೈಲಿನ ತಪಾಸಣಾ ಘಟಕ ಸೇರಿದಂತೆ ಸ್ಥಳದಲ್ಲಿ ಮೂರು ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಜೈಲಿನಲ್ಲಿ ಡಿಸಿಪಿ ಒಳಗೊಂಡಂತೆ ಒಬ್ಬರು ಎಸಿಪಿ, 7 ಜನ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜೈಲಿನ ಹೊರಗೂ ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಜೈಲು ಗೇಟ್ ಬಳಿ ಆಗಮಿಸುತ್ತಿರುವ ಸಾರ್ವಜನಿಕರನ್ನು ವಾಪಸ್ ಕಳುಹಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದರ್ಶನ್ ಅಭಿಮಾನಿಗಳು ಸೇರಿದಂತೆ ಸದ್ಯಕ್ಕೆ ಜೈಲು ಬಳಿ ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News