ಅರ್ಕಾವತಿ 'ರೀಡೂ' ಪ್ರಕರಣಕ್ಕೆ ಸಂಬಂಧಿಸಿದ ನ್ಯಾ.ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಕೊಡಿ: ಸರಕಾರಕ್ಕೆ ರಾಜ್ಯಪಾಲರ ಪತ್ರ

Update: 2024-09-22 05:05 GMT

ಬೆಂಗಳೂರು: ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ‘ರೀಡೂ’ ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರ ಮತ್ತು ರಾಜಭವನದ ಮಧ್ಯೆ ಸಂಘರ್ಷ ತಾರಕಕ್ಕೇರುತ್ತಿದ್ದು, 2013–18ರ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಿನ ಪ್ರಕರಣದ ವಿಚಾರಣೆಯ ವಿವರಣೆಯನ್ನು ರಾಜ್ಯಪಾಲರು ಕೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಆಯೋಗದ ವರದಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಸೆ.11ರಂದು ಸಲ್ಲಿಸಿದೆ.

Full View

ಏನಿದು ಪ್ರಕರಣ: ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 540 ಎಕರೆಯನ್ನು ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ‘ರೀಡೂ’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು, ಅಂದಿನ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ವಿಧಾನಸಭಾ ಅಧಿವೇಶನದಲ್ಲಿ ಆರೋಪ ಮಾಡಿದ್ದರು.

ಇದು ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿತ್ತು. ಅಂತಿಮವಾಗಿ ಈ ಪ್ರಕರಣದ ವಿಚಾರಣೆಗೆ ರಾಜ್ಯ ಸರಕಾರವು 2014ರ ಆಗಸ್ಟ್ನಲ್ಲಿ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 2004ರಿಂದ 2014ರವರೆಗೆ 983 ಎಕರೆ ವಿಸ್ತೀರ್ಣವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಆಯೋಗಕ್ಕೆ ಸರಕಾರ ಸೂಚಿಸಿತ್ತು.

2017ರ ಆಗಸ್ಟ್ನಲ್ಲಿ ಆಯೋಗವು 1,861 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಠಿಯಾರಿಗೆ ಸಲ್ಲಿಸಿತ್ತು. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂದಿನ ಸರ್ಕಾರ ಮಂಡಿಸಿತ್ತು.

‘ಕೆಂಪಣ್ಣ ಆಯೋಗವು ತಮ್ಮನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದರು. ಬಳಿಕ ಬಂದ ಬಿಜೆಪಿ, ಸರಕಾರ ಈ ವಿಚಾರವನ್ನು ಕೆದಕುವ ಪ್ರಯತ್ನ ಮಾಡಿರಲಿಲ್ಲ.

ಆದರೆ ಇದೀಗ ರಾಜ್ಯಪಾಲರು ಕೆಂಪಣ್ಣ ವಿಚಾರಣಾ ಆಯೋಗದ ವರದಿಯನ್ನು ಕೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News