ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಆರೋಪಿಗಳಾದ ಪತ್ನಿ, ಪುತ್ರಿಯ ಬಂಧನ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿಜಿ ಐಜಿಪಿ ಓಂ ಪ್ರಕಾಶ್
ಬೆಂಗಳೂರು: ಕರ್ನಾಟಕದ ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿಗಳಾದ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಪ್ರಕರಣದ ತನಿಖೆಯ ಹೊಣೆಯನ್ನು ಮಡಿವಾಳ ಎಸಿಪಿ ವಾಸುದೇವ್ ಹೆಗಲಿಗೆ ವಹಿಸಲಾಗಿದೆ. ಓಂ ಪ್ರಕಾಶ್ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದು ಮಡಿವಾಳ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದ್ದು, ವಿಚಾರಣೆಯ ನಂತರ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಂಜೆ ವೇಳೆಗೆ ಪತ್ನಿ ಮತ್ತು ಪುತ್ರಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.
ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ಮನೆಯ ಮೊದಲ ಅಂತಸ್ತಿನಲ್ಲಿ ಓಂ ಪ್ರಕಾಶ್ ಅವರ ಮಗ ಮತ್ತು ಸೊಸೆ ವಾಸಿಸುತ್ತಿದ್ದು, ಈಗ ಸಾಕ್ಷಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರೌಂಡ್ ಫ್ಲೋರ್ ಸೀಜ್ ಮಾಡಲಾಗಿದೆ.