ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ: 10 ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ
ಬೆಂಗಳೂರು, ಆ.7: ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಪ್ಪನ ಅಗ್ರಹಾರ ಪೊಲೀಸರು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಸಿದ್ದಾಪುರ ಮಹೇಶ್‍ನ ವಿರೋಧಿ ಗುಂಪಿನ ಆರೋಪಿಗಳಾದ ಗ್ರೇಸ್ ವಾಲ್ಟರ್, ಶ್ರೀನಿವಾಸ ಯಾನೆ ಪಾಪ, ಗೋಕುಲ್, ಸುರೇಶ್, ಕಾರ್ತಿಕ್, ವಾಲೆ ಪ್ರವೀಣ, ಸಿದ್ದಾಪುರ ಸುನೀಲ್, ಕಣ್ಣನ್ ವೇಲ, ಪ್ರದೀಪ್, ಮನು ಸೇರಿ 10 ಮಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದಂತೆ ರೌಡಿಶೀಟರ್ ವಿಲ್ಸನ್‍ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್ ಸಿದ್ದಾಪುರ ಮಹೇಶ್‍ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ವಿರೋಧಿ ಗುಂಪು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಹತ್ಯೆಯಾದ ರೌಡಿಶೀಟರ್ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು.
2020ರಲ್ಲಿ ಜಯನಗರದಲ್ಲಿ ನಡೆದಿದ್ದ ಮದನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಮಹೇಶ್ ಜೈಲು ಸೇರಿದ್ದನು. ಈತನಿಗೆ ಆಗಸ್ಟ್ 6ರಂದು ಜೈಲಿನಿಂದ ಬಿಡುಗಡೆಯಾಗಿತ್ತು. ನಗರದ ಹೊಸ ರೋಡ್ ಜಂಕ್ಷನ್ ಬಳಿ ರೌಡಿಶೀಟರ್ ಸಿದ್ದಾಪುರ ಮಹೇಶ್ ಕಾರಿನಲ್ಲಿ ತೆರಳುತ್ತಿದ್ದನು. ಈ ವೇಳೆ, ದಾಳಿ ನಡೆಸಿದ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ, ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿದ್ದಾಪುರ ಮಹೇಶ್‍ನ ವಿರೋಧಿ ಗುಂಪಿನ ರೌಡಿಶೀಟರ್ ವಿಲ್ಸನ್‍ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.