ಘಾಟ್ ರಸ್ತೆಗಳ ಕಾಮಗಾರಿಗಳ ಪೂರ್ಣಗೊಳಿಸಲು ಪ್ರಯತ್ನ: ಸತೀಶ್ ಜಾರಕಿಹೊಳಿ

Update: 2025-03-19 21:11 IST
ಘಾಟ್ ರಸ್ತೆಗಳ ಕಾಮಗಾರಿಗಳ ಪೂರ್ಣಗೊಳಿಸಲು ಪ್ರಯತ್ನ: ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • whatsapp icon

ಬೆಂಗಳೂರು : ರಾಜ್ಯದಲ್ಲಿರುವ ಘಾಟ್ ರಸ್ತೆಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಒಟ್ಟು 273 ಕಿ.ಮೀ. ಉದ್ದದ 14 ಘಾಟ್ ರಸ್ತೆಗಳಿದ್ದು, ಇವುಗಳಲ್ಲಿ ಪ್ರತಿನಿತ್ಯ ವಾಹನಗಳು ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಾಸನದಿಂದ ಮಾರನಹಳ್ಳಿ ರಸ್ತೆಯಲ್ಲಿ ಬರುವ ಶಿರಾಡಿ ಘಾಟ್‍ನ 10 ಕಿ.ಮೀ. ಉದ್ದ ರಸ್ತೆ ಒಳಪಡಲಿದ್ದು, ಈ ಭಾಗದಲ್ಲಿ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಈ ರಸ್ತೆ ಭಾಗದಲ್ಲಿ ಉಂಟಾಗುತ್ತಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ, ದಕ್ಷಿಣ ವಲಯ ವ್ಯಾಪ್ತಿಯಲ್ಲಿ 6 ಘಾಟ್‍ಗಳು ಬರುತ್ತಿದ್ದು ಒಟ್ಟಾರೆ 145 ಕಿ.ಮೀ. ಉದ್ದವಿರುತ್ತದೆ. ರಾಷ್ಟ್ರೀಯ ಹೆದ್ದಾರಿ, ಉತ್ತರ ವಲಯ ವ್ಯಾಪ್ತಿಯಲ್ಲಿ 2 ಘಾಟ್‍ಗಳು ಬರುತ್ತಿದ್ದು ಒಟ್ಟಾರೆ 34 ಕಿ.ಮೀ. ಉದ್ದವಿರುತ್ತದೆ. ಈ ಭಾಗದ ಹೆದ್ದಾರಿಗಳ ನಿರ್ವಹಣೆ/ಅಭಿವೃದ್ಧಿ/ನಿರ್ಮಾಣ ಕಾರ್ಯಗಳನ್ನು ಒಟ್ಟಾರೆ 58.62 ಕೋಟಿ ರೂ. ಮೊತ್ತಕ್ಕೆ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದ್ದು, ಘಾಟ್ ಭಾಗದ ಹೆದ್ದಾರಿಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳು ದಕ್ಷಿಣ, ಉತ್ತರ ಹಾಗೂ ಕೇಂದ್ರ ವಲಯ ವ್ಯಾಪ್ತಿಗಳಲ್ಲಿ 6 ಘಾಟ್‍ಗಳು ಬರುತ್ತಿದ್ದು ಒಟ್ಟಾರೆ 87.64 ಕಿ.ಮೀ. ಉದ್ದವಿರುತ್ತದೆ. 2024-25 ನೇ ಸಾಲಿನಲ್ಲಿ 70.60 ಲಕ್ಷ ರೂ. ಮೊತ್ತದಲ್ಲಿ ವಾರ್ಷಿಕ ರಸ್ತೆ ನಿರ್ವಹಣೆ ಕಾಮಗಾರಿಗಳಡಿ ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಘಾಟ್ ರಸ್ತೆಗಳಲ್ಲಿ ಒಟ್ಟಾರೆ 115 ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. 54.09 ಕೋಟಿ ರೂ. ಅಂದಾಜು ಮೊತ್ತದಲ್ಲಿ ತಡೆಗೋಡೆ ನಿರ್ಮಾಣ, ರಸ್ತೆ ಕುಸಿತದ ಮನರ್ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ ಎಂದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News