ಕಾಮಗಾರಿ ಬಿಲ್ ಪಾವತಿಯಲ್ಲಿ ಕುಟುಂಬದ ಹಸ್ತಕ್ಷೇಪವಿಲ್ಲ : ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಂಗಳೂರು: ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯೊಳಗೆ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ನಮ್ಮ ಕುಟುಂಬದ ಸದಸ್ಯರ ಹಸ್ತಕ್ಷೇಪವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಬಾಕಿ ಬಿಲ್‍ಗಳ ಪಾವತಿಗೆ ಶಿಫಾರಸುಗಳು ಬರುತ್ತವೆ. ಅದನ್ನು ಇಲಾಖೆ ಪರಿಗಣಿಸುತ್ತದೆ. ವಿಶೇಷವಾಗಿ ಶೇ.25ರಷ್ಟು ಬಿಲ್ ಪಾವತಿಗೆ ಮೊದಲಿನಿಂದಲೂ ಅವಕಾಶವಿದೆ. ಉಳಿದಂತೆ ಜ್ಯೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತದೆ ಎಂದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರ ಸಂಘವು ಈ ಮೊದಲು ನೀಡಿದ್ದ ಸಲಹೆಗಳನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಯಾವುದೇ ಸಲಹೆಗಳನ್ನು ನೀಡಿದರೆ ಅದನ್ನು ಪರಿಗಣಿಸುತ್ತೇನೆ. ರಾಜಕಾರಣ ಎಂದ ಮೇಲೆ ಶಾಸಕರು, ಪಕ್ಷದ ಕಾರ್ಯಕರ್ತರು ಶಿಫಾರಸು ನೀಡುವುದು ಸಹಜ. ಅದರಲ್ಲಿ ತಪ್ಪಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಗುತ್ತಿಗೆದಾರರ ಸಂಘದವರು ಸಭೆ ಮಾಡಿಯೇ ಸಲಹೆ ನೀಡಬೇಕೆಂದೇನಿಲ್ಲ. ಔಪಚಾರಿಕವಾಗಿ ಸಲಹೆ ನೀಡಿದರೂ ಅದನ್ನು ಪರಿಗಣಿಸುತ್ತೇವೆ. ಲೋಕೋಪಯೋಗಿ ಇಲಾಖೆಯಿಂದ ಯಾರೂ ಕಮಿಷನ್ ಕೇಳುತ್ತಿಲ್ಲ. ಒಂದು ವೇಳೆ ಅಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.