ಶಿರಾದಲ್ಲಿ 2ನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾದರೆ 7-8 ಜಿಲ್ಲೆಗಳಿಗೆ ಅನುಕೂಲ : ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರು : ತುಮಕೂರು ಜಿಲ್ಲೆಯ ಶಿರಾ ಸಮೀಪದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಏಳೆಂಟು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲಿ ಸರಕಾರದ ಭೂಮಿ ಕೂಡ ಲಭ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶಿರಾದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕೆಂದು ನಾನು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದೇನೆ ಎಂದರು.
ಶಿರಾದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೆ, ಏಳೆಂಟು ಜಿಲ್ಲೆಗಳ ಜನರು ಅನುಕೂಲ ಮತ್ತು ಸಂಚಾರ ದಟ್ಟಣೆ ನಿಯಂತ್ರಣಗೊಳ್ಳುತ್ತದೆ. ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಬೆಂಗಳೂರು ಬಳಿಯೇ ಮತ್ತೊಂದು ವಿಮಾನ ನಿಲ್ದಾಣವಾದರೆ ಮತ್ತೆ 5 ಸಾವಿರ ವಾಹನಗಳು ಬರುತ್ತವೆ. ಮತ್ತಷ್ಟು ಸಂಚಾರದಟ್ಟಣೆ ಹೆಚ್ಚಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಾವು ಏನೇ ಶಿಫಾರಸು ಮಾಡಿದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಅಂತಿಮವಾಗಿ ತೀರ್ಮಾನ ಮಾಡುತ್ತದೆ. ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಜ್ಞರ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಏನೇ ಹೇಳಿದರೂ ಅದು ಕಾರ್ಯಸಾಧುವಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ದೊಡ್ಡ ಸಂಸ್ಥೆಯವರು ಮುಂದೆ ಬರುವುದಿಲ್ಲ. ಜಿಲ್ಲೆಯ ವಿಮಾನ ನಿಲ್ದಾಣವಾಗುತ್ತದೆ ಎಂದು ಟೀಕಿಸುವುದು ಅಪ್ರಸ್ತುತ. ಬೆಂಗಳೂರಿನ ಪರಿಸ್ಥಿತಿಯನ್ನೂ ಗಮನಿಸಬೇಕು. ಕೇವಲ ಬೆಂಗಳೂರಿನವರು ಮಾತ್ರ ವಿದೇಶಗಳಿಗೆ ಹೋಗುವುದಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದಲೂ ಹೋಗುತ್ತಾರೆ. ಬೆಂಗಳೂರಿಗೆ ಮತ್ತೆ 5 ಸಾವಿರ ವಾಹನಗಳು ಹೆಚ್ಚಾಗಿ ಬಂದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನೂ ಪರಿಗಣಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.