ಮುಸ್ಲಿಮರ ಮತ ಬೇಡ ಹೇಳಿಕೆ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Update: 2023-12-02 13:59 GMT

ಬೆಂಗಳೂರು: ‘ನಮಗೆ ಮುಸ್ಲಿಮರ ಮತ ಬೇಡ’ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೆ.ಎಸ್.ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು. ಕೆ.ಎಸ್.ಈಶ್ವರಪ್ಪ ಪರ ವಕೀಲ ಎಂ.ವಿನೋದ್ ಕುಮಾರ್ ವಾದ ಮಂಡಿಸಿದರು.

ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಿಎಂ ಯಡಿಯೂರಪ್ಪರ ಶಿವಮೊಗ್ಗದ ಮನೆಯ ಆವರಣದಲ್ಲಿ 2023ರ ಎ.25ರಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಮಾತನಾಡುತ್ತ, ‘ಶಿವಮೊಗ್ಗದಲ್ಲಿ 50ರಿಂದ 55 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆದರೆ, ನಮಗೆ ಒಂದೇ ಒಂದು ಮುಸ್ಲಿಮರ ಮತ ಬೇಡ’ ಎಂದು ಹೇಳಿದ್ದರು ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವರದಿಯಾಗಿತ್ತು.

ಈ ಸುದ್ದಿಯನ್ನು ಆಧರಿಸಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಎಚ್. ಮಹೇಶ್ ಮೇ 6ರಂದು ವಿನೋಬಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗ ಜೆಎಂಎಫ್‍ಸಿ ನ್ಯಾಯಾಧೀಶರು ಪ್ರಕರಣದ ತನಿಖೆಗೆ ವಿನೋಬಾನಗರ ಪೊಲೀಸರಿಗೆ ಅನುಮತಿ ನೀಡಿದ್ದರು. ಅದರಂತೆ, ಮೇ 8ರಂದು ಎಫ್‍ಐಆರ್ ದಾಖಲಿಸಲಾಗಿತ್ತು. ಡಿ.2ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಇದೀಗ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ.

ಖಾಸಗಿ ಸುದ್ದಿ ಸಂಸ್ಥೆಯ ಎಕ್ಸ್ ಖಾತೆಯಲ್ಲಿ ಬಂದ ಮಾಹಿತಿ ಆಧರಿಸಿ ದೂರು ದಾಖಲಿಸಲಾಗಿದೆ. ಉಳಿದಂತೆ ಪ್ರಕರಣದಲ್ಲಿ ಯಾವುದೇ ಬಲವಾದ ಸಾಕ್ಷಿ-ಪುರಾವೆಗಳಿಲ್ಲ. ಹೀಗಾಗಿ, ಇಂಥ ಪ್ರಕರಣದ ತನಿಖೆ ಕಾನೂನಿನ ದುರ್ಬಳಕೆ ಆಗಲಿದ್ದು, ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News