ವಾಲ್ಮೀಕಿ ನಿಗಮದಲ್ಲಿ ಹಗರಣ | ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು : ಡಿ.ಕೆ.ಶಿವಕುಮಾರ್

Update: 2024-07-18 16:32 GMT

Photo : x/@DKShivakumar

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪು ಮಾಡಿರುವುದು ಬ್ಯಾಂಕ್ ಮ್ಯಾನೇಜರ್. ಇದಕ್ಕೆ ಸಿಎಂ ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಗರಣಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧವಿದೆ? ಅಧಿಕಾರಿ ತಪ್ಪು ಮಾಡಿದರೆ ಮುಖ್ಯಮಂತ್ರಿ ಜವಾಬ್ದಾರರಾಗುತ್ತಾರೆಯೇ? ಬ್ಯಾಂಕ್ ಅಧಿಕಾರಿ ಒಂದೇ ದಿನದಲ್ಲಿ ಆರೋಪಿಗಳಿಗೆ ಸಾಲ ಮಂಜೂರು ಮಾಡಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ಎಂದರು.

ಪ್ರತಿಪಕ್ಷಗಳಿಗೆ ಸದನದ ಕಲಾಪಗಳು ನಡಾವಳಿಗಳ ತಿಳುವಳಿಕೆಯಿಲ್ಲ. ಅವರಿಗೆ ನಾವು ಮಾತನಾಡಲು ಅವಕಾಶ ನೀಡಿದ್ದೇವೆ. ಮುಖ್ಯಮಂತ್ರಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಆದರೆ ನೀಡಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿದ್ದು, ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಶಿವಕುಮಾರ್ ಹೇಳಿದರು.

ನಾವು ಯಾವುದೇ ತಪ್ಪು ಮಾಡಿಲ್ಲ, ಸರಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದು, ಇದನ್ನು ರಾಜಕೀಯವಾಗಿ ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಎಸ್‍ಐಟಿ ರಚನೆ ಮಾಡಿದ್ದೇವೆ. ಈ.ಡಿ, ಸಿಬಿಐನಿಂದ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ಮುಖ್ಯಮಂತ್ರಿಯನ್ನು ಗುರಿ ಮಾಡುವುದು ತಪ್ಪು. ದೊಡ್ಡ ಕಾರ್ಪೊರೇಟ್ ಕಂಪನಿಯಲ್ಲಿ ಯಾರೋ ನೌಕರ ಕ್ರಿಮಿನಲ್ ತಪ್ಪು ಮಾಡುತ್ತಾನೆ, ಅದಕ್ಕೆ ಕಂಪನಿಯ ಮುಖ್ಯಸ್ಥನನ್ನು ಗುರಿ ಮಾಡಲು ಆಗುತ್ತದೆಯೇ? ಎಂದು ಉಪ ಮುಖ್ಯಮಂತ್ರಿ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News