ಮೇ 5ರಿಂದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಜನರು ತಪ್ಪದೇ ಭಾಗವಹಿಸಬೇಕು: ಎಚ್.ಆಂಜನೇಯ

Update: 2025-04-28 00:02 IST
ಮೇ 5ರಿಂದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಜನರು ತಪ್ಪದೇ ಭಾಗವಹಿಸಬೇಕು: ಎಚ್.ಆಂಜನೇಯ

ಎಚ್. ಆಂಜನೇಯ

  • whatsapp icon

ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯ ದತ್ತಾಂಶ ಸಂಗ್ರಹ ಕಾರ್ಯ ಮೇ 5ರಿಂದ 17ರ ವರೆಗೆ ನಡೆಯಲಿದ್ದು, ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಎಲ್ಲ ಕುಟುಂಬಗಳು ತಪ್ಪದೇ ಭಾಗವಹಿಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಕರೆ ನೀಡಿದ್ದಾರೆ.

ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ‘ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ’ ವತಿಯಿಂದ ಆಯೋಜಿಸಿದ್ದ ‘ಒಳಮೀಸಲಾತಿಗೆ ಸಮೀಕ್ಷೆಯ ಆರಂಭ ಮಾದಿಗ ಮುಖಂಡರ ಜಾಗೃತಿ ಸಭೆ’ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇ 5ರಿಂದ 17ರ ವರೆಗೂ ನಡೆಯುವ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದವರು, ಮೇ 19ರಿಂದ 21ರ ವರೆಗೂ ತಮ್ಮ ಮತ ಕ್ಷೇತ್ರಗಳಲ್ಲಿರುವ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ರೇಷನ್ ಕಾರ್ಡ್‍ನೊಂದಿಗೆ ತೆರಳಿ ‘ಮಾದಿಗ’ ಎಂದು ನಮೂದಿಸಬೇಕು ಎಂದು ಹೇಳಿದರು.

ನಗರಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿರುವ ಕೆಲವು ಕರ್ನಾಟಕದ ಮಾದಿಗ ಸಮುದಾಯದವರು ಕೀಳರಿಮೆಯಿಂದ ಮಾದಿಗ ಎಂದು ಬರೆಸಲು ಹಿಂದೆ ಸರಿಯುತ್ತಾರೆ. ಅಂತಹವರು ತಮ್ಮ ಜಾತಿಯನ್ನು ಆನ್‍ಲೈನ್ ಮುಖಾಂತರವಾದರೂ ನಮೂದಿಸಬೇಕು. ಸಮುದಾಯದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಚಿಂತನೆ ಮಾಡುವರೆಲ್ಲರೂ ಸಮೀಕ್ಷೆ ವೇಳೆಯುಲ್ಲಿ ತಮ್ಮ ಊರುಗಳಲ್ಲಿರುವ ಮಾದಿಗ ಸಮುದಾಯದ ಜನ ಎಲ್ಲೂ ಹೋಗದಂತೆ ಮನೆಯಲ್ಲಿಯೇ ಇದ್ದು ಸಮೀಕ್ಷೆ ಕಾರ್ಯಕ್ಕೆ ಸ್ಪಂದಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮುದಾಯದ ಪರವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಒಳಮೀಸಲಾತಿಯನ್ನು ಪಡೆದುಕೊಳ್ಳಬೇಕು. ಅನಗತ್ಯವಾಗಿ ಅವರನ್ನು ಟೀಕೆ ಮಾಡುವ ಮತ್ತು ನಿಂಧಿಸುವ ಕೆಲಸ ಮಾಡಬಾರದು. ಒಳಮೀಸಲಾತಿಗೆ ಎಲ್ಲ ರಾಜಕೀಯ ಪಕ್ಷದವರೂ ಬೆಂಬಲ ನೀಡಿದ್ದಾರೆ. ಅವರನ್ನೂ ಗೌರವದಿಂದ ಕಾಣಬೇಕು ಎಂದು ಆಂಜನೇಯ ಹೇಳಿದರು.

ನಾಡೋಜ ಗೋನಾಳ್ ಭೀಮಪ್ಪ ಮಾತನಾಡಿ, ಸಮುದಾಯದ ಜನರನ್ನು ಗಣತಿಗೆ ಒಳಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ನಮಗೆ ಬಂದಿರುವ ಸದಾವಕಾಶ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ. ಮಾದಿಗ ಸಮುದಾಯಗಳು ಇರುವ ವಾರ್ಡ್‍ಗಳಿಗೆ ಹೋಗಿ ಜಾಗೃತಿ ಮೂಡಿಸಬೇಕಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಇತರ ಸಮುದಾಯಗಳು ಈಗಾಗಲೇ ಜಾಗೃತಿ ಮೂಡಿಸುತ್ತಿವೆ. ಮಾದಿಗ ಸಮುದಾಯವು ಇದೇ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಿದೆ. ಎ.ಕೆ., ಎ.ಡಿ. ಬೇಡ ಎಂದು ಹೇಳಬೇಕಿದೆ. ಸಮೀಕ್ಷೆಯ ಪಟ್ಟಿಯಲ್ಲಿನ ನಮ್ಮ ಕ್ರಮ ಸಂಖ್ಯೆ 61ರಲ್ಲಿ ಜಾತಿಯನ್ನು ತಪ್ಪದೇ ದಾಖಲಿಸಬೇಕಿದೆ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಿವೃತ್ತ ಅಪರ ಆಯುಕ್ತ ಎಚ್.ಆರ್.ತೆಗನೂರು, ನಿವೃತ್ತ ಅಧಿಕಾರಿ ಭೀಮಾಶಂಕರ್, ಮುಖಂಡರಾದ ಜಿ.ಎಸ್.ಮಂಜುನಾಥ, ಬಸವರಾಜ್ ಮಾಲಗತ್ತಿ, ಡಾ.ಬಾಬುರಾವ್ ಮುಡಬಿ, ಓ.ಶಂಕರ್, ಜಗದೀಶ ಬೆಟಗೆರೆ, ಎಂ.ಆರ್.ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News