ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ | ಎನ್‍ಎಸ್‍ಪಿ ಸರ್ವರ್ ಸಮಸ್ಯೆಯಿಂದ ಹೈರಾಣಾಗಿರುವ ಶಿಕ್ಷಣ ಸಂಸ್ಥೆಗಳು

Update: 2023-08-16 18:31 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.16: ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ವತಿಯಿಂದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿರುವ 9 ಮತ್ತು 10ನೇ ತರಗತಿಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ನೋಡಲ್ ಅಧಿಕಾರಿಗಳು ಬಯೋಮೆಟ್ರಿಕ್ ದೃಢೀಕರಣ ನೀಡುವುದು ಕಡ್ಡಾಯ ಮಾಡಲಾಗಿದೆ.

ಇದೀಗ, ಎನ್‌ಎಸ್‌ಪಿ(ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್) ಸರ್ವರ್ ಸಮಸ್ಯೆಯಿಂದಾಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ನೋಡಲ್ ಅಧಿಕಾರಿಗಳು ಇಡೀ ದಿನ ಸಂಬಂಧಪಟ್ಟ ಸರಕಾರಿ ಕಚೇರಿಗಳ ಎದುರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಅಂಬೇಡ್ಕರ್ ವೀಧಿಯಲ್ಲಿರುವ ವಿಶ್ವೇಶ್ವರಯ್ಯ ಗೋಪುರ, ಶೇಷಾದ್ರಿಪುರಂನಲ್ಲಿರುವ ಕೆಎಂಡಿಸಿ ಭವನ ಹಾಗೂ ಬನಶಂಕರಿಯಲ್ಲಿ ಬಯೋಮೆಟ್ರಿಕ್ ದೃಢೀಕರಣ ನೀಡಲು ವ್ಯವಸ್ಥೆ ಮಾಡಲಾಗಿದೆ.

ಆದರೆ, ಬುಧವಾರ ಬೆಳಗ್ಗೆಯಿಂದಲೆ ಎನ್‌ಎಸ್‌ಪಿ(ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್) ಸರ್ವರ್ ಕೈಕೊಟ್ಟ ಹಿನ್ನೆಲೆಯಲ್ಲಿ ಶಾಲೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಸಿಬ್ಬಂದಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದಿಕ್ಕೆಟ್ಟು ಹೋಗಿದ್ದಾರೆ.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೆಸರು ಹೇಳಲು ಇಚ್ಛಿಸಿದ ಪ್ರಾಂಶುಪಾಲರೊಬ್ಬರು, ಬೆಳಗ್ಗೆಯಿಂದ ನಾವು ಇಲ್ಲಿ ಬಂದು ಕಾದು ಕುಳಿತಿದ್ದೇವೆ. ಇಲ್ಲಿನ ಸಿಬ್ಬಂದಿಯೇ ನಮಗೆ ಕರೆ ಮಾಡಿ ಬಯೋ ಮೆಟ್ರಿಕ್ ಕೊಡಲು ಬರುವಂತೆ ಹೇಳಿದ್ದರು. ಅದರಂತೆ, ನಾವು ತಕ್ಷಣ ಇಲ್ಲಿಗೆ ಬಂದೆವು. ಆದರೆ, ಗಂಟೆಗಟ್ಟಲೆ ಕಾದರೂ ಸರ್ವರ್ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವರ್ ಯಾವಾಗ ಸರಿ ಹೋಗುತ್ತದೆ ಎಂದು ಕೇಳಿದರೆ ಅಧಿಕಾರಿಗಳ ಬಳಿ ಯಾವುದೆ ಉತ್ತರ ಇಲ್ಲ. ಎನ್‌ಎಸ್‌ಪಿ ಕೇಂದ್ರ ಸರಕಾರದ ಸರ್ವರ್, ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ. ನಾವು ಕೇಂದ್ರ ಸರಕಾರದ ಅಧಿಕಾರಿಗಳ ಬಳಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದು, ಶೀಘ್ರವೆ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯು 2022ರ ಆ.15ರಂದು ಹೊರಡಿಸಿರುವ ಆದೇಶದಲ್ಲಿ ‘ವಿದ್ಯಾರ್ಥಿ ವೇತನ ಯೋಜನೆಗಳ ಅಡಿಯಲ್ಲಿ ವೇತನವನ್ನು ವಿತರಿಸಲು 2022-23ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕನಾಮಿಕ್ ರಿಸರ್ಚ್ (ಎನ್‌ಸಿಎಇಆರ್)ಭೌತಿಕ ಪರಿಶೀಲನೆಗಳನ್ನು ನಡೆಸಿತ್ತು. ಈ ವೇಳೆ ಕೆಲವೊಂದು ಸಂಸ್ಥೆಗಳು ಹಾಗೂ ಫಲಾನುಭವಿಗಳ ದೃಢೀಕರಣದಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಧಾರ್ ಆಧಾರಿತ ಬಯೋ-ಮೆಟ್ರಿಕ್ ದೃಢೀಕರಣ ಮಾಡಲು ನಿರ್ಧರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News