ಎಸ್‍ಸಿಪಿ-ಟಿಎಸ್‍ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ತಡೆಗಟ್ಟಿ : ವಿಧಾನಮಂಡಲ ಎಸ್‍ಸಿ, ಎಸ್‍ಟಿ ಕಲ್ಯಾಣ ಸಮಿತಿ ಶಿಫಾರಸ್ಸು
ಬೆಂಗಳೂರು : ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆಯಡಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕಾಗಿ ಬಳಕೆ ಮಾಡುವುದು ಕಾಯ್ದೆಗೆ ವಿರುದ್ಧ, ಶಿಕ್ಷಾರ್ಹ. ಆದುದರಿಂದ ಈ ಹಣವನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳ ಮೂಲಸೌಕರ್ಯ ಮತ್ತು ವಿದ್ಯಾರ್ಥಿ ವೇತನಕ್ಕೆ ಹಂಚಿಕೆ ಮಾಡಬೇಕು ಎಂದು ವಿಧಾನಮಂಡಲ ಎಸ್‍ಸಿ-ಎಸ್‍ಟಿ ಕಲ್ಯಾಣ ಸಮಿತಿ, ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಿದೆ.
ಗುರುವಾರ ವಿಧಾನಸಭೆಯಲ್ಲಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಪ್ರತಿಪಕ್ಷಗಳ ಸದಸ್ಯರ ಧರಣಿ, ಗದ್ದಲದ ಮಧ್ಯೆ ಸಮಿತಿಯ ಮೂರನೇ ವರದಿಯನ್ನು ಮಂಡನೆ ಮಾಡಿದರು. ಎಸ್‍ಸಿಪಿ/ಟಿಎಸ್‍ಪಿ ಅನುದಾನವನ್ನು ‘ಶಕ್ತಿ ಯೋಜನೆ’ಗೆ ಬಳಕೆ ಮಾಡುವುದು ಸರಿಯಲ್ಲ. ಈ ಅನುದಾನವನ್ನು ಆ ಸಮುದಾಯದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ.
ಕ್ರೈಸ್ಟ್ ವಸತಿ ಶಾಲೆಗಳಲ್ಲಿ ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ವೆಚ್ಚ ಮಾಡಬೇಕಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದಿರುವುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಎಸ್‍ಸಿಪಿ/ಟಿಎಸ್‍ಪಿ ಅನುದಾನವನ್ನು ಕಾಯ್ದೆಯ ಸೆಕ್ಷನ್ 7 ‘ಸಿ’ ಅಡಿಯಲ್ಲಿ ಸಾಮೂಹಿಕ ಬಳಕೆ ತಪ್ಪಿಸಲು ಕಾಯ್ದೆಯ 7 ‘ಸಿ’ ರದ್ದುಗೊಳಿಸಬೇಕು. ವಸತಿ ಶಾಲೆ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ಕಡ್ಡಾಯವಾಗಿ ಮಹಿಳಾ ವಾರ್ಡನ್‍ಗಳನ್ನು ನೇಮಕ ಮಾಡಬೇಕು ಎಂದು ಸಮಿತಿ ತಿಳಿಸಿದೆ.
ಕೆಆರ್‌ಐಡಿಎಲ್ ಅಥವಾ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಹಂಚಿಕೆ ವೇಳೆ ಒಗ್ಗೂಡಿಸಿ ನೀಡದೆ, 1 ಕೋಟಿ ರೂ.ವರೆಗೆ ಇರುವ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಗುತ್ತಿಗೆದಾರರಿಗೆ ಮೀಸಲಾತಿ ಅನ್ವಯ ನೀಡಬೇಕು. ಬ್ಯಾಕ್‍ಲಾಗ್ ಹುದ್ದೆಗಳನ್ನು ನೇಮಕಾತಿ ನಿಯಮಗಳ ಅನ್ವಯ ಕೂಡಲೇ ಎಲ್ಲ ಕೃಷಿ ವಿವಿ ಮತ್ತು ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.
ಕ್ರಮಕ್ಕೆ ಶಿಫಾರಸ್ಸು: ‘ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ ಪದ್ಧತಿ ಈಗಲೂ ಯಾರಾದರೂ ಮಾಡಿಸುತ್ತಿದ್ದರೆ, ಇಲಾಖೆಯಿಂದ ಪತ್ತೆ ಹಚ್ಚಿ, ಈ ಕೆಲಸ ಮಾಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಈ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ವಿವಿಧ ನಿಗಮಗಳ ಅನುದಾನವನ್ನು ಬ್ಯಾಂಕ್ ಖಾತೆಯಲ್ಲಿದ್ದರೂ ಉದ್ದೇಶಿತ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಬಳಕೆ ಮಾಡದ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು’
-ಪಿ.ಎಂ.ನರೇಂದ್ರಸ್ವಾಮಿ, ವಿಧಾನಮಂಡಲ ಎಸ್‍ಸಿ-ಎಸ್‍ಟಿ ಕಲ್ಯಾಣ ಸಮಿತಿ ಅಧ್ಯಕ್ಷ