ಅಧಿವೇಶನ | ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ(ತಿದ್ದುಪಡಿ)ವಿಧೇಯಕ ಅಂಗೀಕಾರ

ಬೆಂಗಳೂರು : ಸಾರ್ವಜನಿಕ ಭೂಮಿಗಳು, ಜಲ ನಿಕಾಯಗಳು ಮತ್ತು ಗೋಮಾಳಗಳು ಇತ್ಯಾದಿಗಳ ಉದ್ದೇಶಪೂರ್ವಕವಾದ ದುರ್ಬಳಕೆ ಮತ್ತು ಒತ್ತುವರಿಯಿಂದ ರಕ್ಷಿಸುವ ಉದ್ದೇಶ ಹೊಂದಿರುವ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ಲಭಿಸಿತು.
ವಿಧೇಯಕವನ್ನು ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಭೂ ದಾಖಲೆಗಳು ಶಾಶ್ವತವಾಗಿ ಸಂರಕ್ಷಿಸಲೇಬೇಕಾಗಿದೆ. ಮೂಲ ದಾಖಲೆಗಳ ಅಕ್ರಮ ತಿದ್ದುವಿಕೆಯ ಮೂಲಕ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆಯ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಭೂ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವ ಮತ್ತು ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದೊಂದಿಗೆ ಎಲ್ಲಾ ಕಂದಾಯ ದಾಖಲೆಗಳನ್ನು ಡಿಜಿಟಲೀಕರಿಸುವ ಸಂಬಂಧದಲ್ಲಿ ಕಂದಾಯ ಅಧಿಕಾರಿಗಳಿಗೆ ಜವಾಬ್ದಾರಿಗಳು ಮತ್ತು ಉತ್ತರದಾಯಿತ್ವಗಳ ಸಂವರ್ಗವನ್ನು ನೀಡಲಾಗಿದೆ ಎಂದು ವಿವರಿಸಿದರು.
ನಿಯಮಗಳಲ್ಲಿ ಸೂಕ್ತ ಕಾರ್ಯವಿಧಾನಗಳು ಮತ್ತು ನಮೂನೆಗಳು ಇತ್ಯಾಧಿಗಳ ಮೂಲಕ ರಾಜ್ಯದಲ್ಲಿನ ಕಂದಾಯ ಆಡಳಿತದಲ್ಲಿ ತಾಂತ್ರಿಕ ಪ್ರಗತಿಗಳು ಮತ್ತು ಕಾರ್ಯಾಚರಣೆಯ ಸುಧಾರಣೆಗಳನ್ನು ಕಾಲಕಾಲಕ್ಕೆ ಮುಂದುವರೆಸಬೇಕಾಗಿರುವುದನ್ನು ಪರ್ಯಾಲೋಚಿಸುವುದು ಅಗತ್ಯವಾಗಿದೆ. ಹಾಗೂ ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಭಾರತೀಯ ಸುರಕ್ಷಾ ಸಂಹಿತೆ ಮತ್ತು ಅವುಗಳಿಗೆ ಸಂಬಂಧಿಸಿದ ಉಪಬಂಧಗಳನ್ನು ಈ ಅಧಿನಿಯಮದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೇರುವುದು ಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಸರಕಾರಿ ಭೂಮಿಗಳು ಹೆಚ್ಚಿನ ಮೌಲ್ಯದ ಜಮೀನುಗಳಾಗಿದ್ದು, ಸಾರ್ವಜನಿಕ ಅಥವಾ ಸರಕಾರಿ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕಾಗಿದೆ. ಕೆಲವು ಕಂದಾಯ ಅಧಿಕಾರಿಗಳು ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಿ, ಅಂತಹ ಕಬಳಿಕೆದರರ ಕ್ಲೇಮುಗಳ ಪರವಾಗಿ ಆದೇಶವನ್ನು ಹೊರಡಿಸುವ ಮೂಲಕ ಕಂದಾಯ ದಾಖಲೆಗಳಲ್ಲಿ ನಮೂದುಗಳನ್ನು ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಅಂತಹ ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ನಿಷೇಧಿಸಿರುವುದರಿಂದ ದಾಖಲೆಗಳ ಹಕ್ಕಿನಲ್ಲಿ ಮಾಡಲಾದ ನಮೂದುಗಳ ಕುರಿತು ರಾಜ್ಯ ಮತ್ತು ಅದರ ಸಿಬ್ಬಂದಿಗಳ ವಿರುದ್ಧ ದಾವೆಗಳನ್ನು ಹೂಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕಂದಾಯ ಅಧಿಕಾರಿಗಳು, ಕಂದಾಯ ದಾಖಲೆಗಳಲ್ಲಿ ವಂಚನೆಯ ಉದ್ದೇಶದ ನಮೂದುಗಳನ್ನು ಮಾಡುವುದರಿಂದ ನಿರ್ಬಂಧಿಸಲು ಹಾಗೂ ಅಂತಹ ಪದ್ಧತಿಗಳನ್ನು ತಡೆಯುವುದಕ್ಕಾಗಿ ಮತ್ತು ಅವರಿಗೆ ಹೆಚ್ಚಿನ ಉತ್ತರದಾಯಿತ್ವವನ್ನು ನೀಡುವುದಕ್ಕಾಗಿ ಸರಕಾರವು ಕಠಿಣ ಮಾನದಂಡಗಳನ್ನು ತರುವುದು ಅವಶ್ಯಕವಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ವಿಧೇಯಕಗಳಿಗೆ ಅಂಗೀಕಾರ: ಮಂಡ್ಯದಲ್ಲಿ ಆರಂಭಿಸಲಾಗುತ್ತಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ 2025ನೇ ಸಾಲಿನ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ ವಿಧೇಯಕ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ವಿಧೇಯಕ, ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ(ತಿದ್ದುಪಡಿ) ವಿಧೇಯಕ, ನೋಂದಣಿ(ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.