ದುಡಿಯುವ ವರ್ಗಕ್ಕೆ ವರದಾನವಾದ ‘ಶಕ್ತಿ’; ಉದ್ಯೋಗ ಅರಸಿ ಬೆಂಗಳೂರಿನತ್ತ ಮಹಿಳೆಯರು..!

Update: 2023-07-24 08:44 GMT

ಬೆಂಗಳೂರು, ಜು. 24: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯೂ ದುಡಿಯುವ ವರ್ಗಕ್ಕೆ ವರದಾನವಾಗಿದ್ದು, ಬೆಂಗಳೂರಿನ ಸುತ್ತಮುತ್ತಲು ನೆಲೆಸಿರುವ ಸಾವಿರಾರು ಮಹಿಳೆಯರು ಉದ್ಯೋಗ ಅರಸಿ ರಾಜಧಾನಿಯತ್ತ ಆಗಮಿಸುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ.

ಬೆಂಗಳೂರಿಗೆ ಹತ್ತಿರದಲ್ಲಿರುವ ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಮಹಿಳೆಯರು ಸ್ಥಳೀಯ ದಿನಗೂಲಿ ಕೆಲಸದ ಬದಲಾಗಿ, ಮಾಸಿಕ ವೇತನ ನೀಡುವ ವಿವಿಧ ಬಗೆಯ ಖಾಸಗಿ ಉದ್ಯೋಗಗಳಿಗೆ ದಿನನಿತ್ಯ ಬೆಂಗಳೂರಿಗೆ ಆಗಮಿಸುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ರಾಜ್ಯ ಸರಕಾರದ ಶಕ್ತಿ ಯೋಜನೆಯೇ ಮುಖ್ಯ ಕಾರಣವಾಗಿದೆ.

ಸ್ಥಳೀಯವಾಗಿ ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆ ಹಾಗೂ ಮನೆಗೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದರು. ಆದರೆ, ಇದೀಗ ಸಾವಿರಾರು ಮಹಿಳೆಯರು ಬೆಂಗಳೂರು ನಗರದಲ್ಲಿ ಮಾಸಿಕವಾಗಿ ವೇತನ ನೀಡುವ ಅಪಾರ್ಟ್‍ಮೆಂಟ್ ಸ್ವಚ್ಛತೆ, ಗಾರ್ಮೆಂಟ್ಸ್, ಬೃಹತ್ ಮಳಿಗೆಗಳಲ್ಲಿ ಸೇಲ್ಸ್ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ದಿನನಿತ್ಯದ ಪ್ರಯಾಣದ ವೆಚ್ಚ ಸಂಪೂರ್ಣ ಉಚಿತವಾಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಈ ಪ್ರಯತ್ನಕ್ಕೆ ಮಹಿಳೆಯರು ಮುಂದಾಗಿದ್ದಾರೆ.

 

‘ಶಕ್ತಿ’ ಯೋಜನೆಯ ಫಲಾನುಭವಿಯೂ ಆಗಿರುವ ಕೋಲಾರದ ಟಮಕಾ ಗ್ರಾಮದ ಮಹಿಳೆ ಸಾವಿತ್ರಿ, ‘ಈ ಕುರಿತು ಪ್ರತಿಕ್ರಿಯಿಸಿ, ನಾನು ಹತ್ತು ವರ್ಷಗಳಿಂದಲೂ ಕೋಲಾರ ನಗರದಲ್ಲಿರುವ ಎರಡು, ಮೂರು ಮನೆಗಳಲ್ಲಿ ಸ್ವಚ್ಛತೆ ಕೆಲಸ ಮಾಡಿ ತಿಂಗಳಿಗೆ 5 ಸಾವಿರ ರೂ.ಅಷ್ಟೇ ದುಡಿಯುತ್ತಿದ್ದೇ. ಇದರಿಂದಲೇ ನನ್ನ ಜೀವನ ನಡೆಯುತಿತ್ತು. ಆದರೆ, ಒಂದು ತಿಂಗಳಿನಿಂದ ಬೆಂಗಳೂರಿನ ಕೆಆರ್‍ಪುರದಲ್ಲಿರುವ ಬೃಹತ್ ಆಭರಣ ಮಳಿಗೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಅಲ್ಲಿ, ಮಾಸಿಕ 14 ಸಾವಿರ ರೂ. ವೇತನ ನೀಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿ ಕಾರಣದಿಂದಲೇ ನಾನು ಕೋಲಾರದಿಂದ ಬೆಂಗಳೂರಿಗೆ ನಿತ್ಯ ಪ್ರಯಾಣ ಬೆಳೆಸಿದ್ದೇನೆ’ ಎಂದು ಹೇಳಿದರು.

 

ಮತ್ತೋರ್ವ ಮಹಿಳೆ ಅಸ್ಮಾ ಖಾನ್ ಪ್ರತಿಕ್ರಿಯಿಸಿ, ‘ನಾನು ಇಂದಿರಾನಗರದಲ್ಲಿರುವ ಖಾಸಗಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೇನೆ. ಅಲ್ಲಿ ಕೋವಿಡ್, ಲಾಕ್‍ಡೌನ್ ಕಾರಣದಿಂದ ವೇತನ ಕಡಿತಗೊಳಿಸಲಾಗಿತ್ತು. ಜತೆಗೆ, ಕೋಲಾರದಿಂದ ಬೆಂಗಳೂರಿಗೆ ಮಾಸಿಕ ಪಾಸ್ ದರ 3 ಸಾವಿರಕ್ಕೂ ಅಧಿಕ ರೂಪಾಯಿ ಆಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದೆ. ಮೇ ತಿಂಗಳಿನಲ್ಲಿಯೇ ವೃತ್ತಿ ಬಿಡಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ, ಕಾಂಗ್ರೆಸ್ ಸರಕಾರ ಬಂದ ಕೂಡಲೇ ಶಕ್ತಿ ಯೋಜನೆ ಜಾರಿಗೊಳಿಸಿದ ಪರಿಣಾಮ ನನ್ನ ಪ್ರಯಾಣ ವೆಚ್ಚದ ಭಾರ ಕಡಿಮೆಯಾಯಿತು. ಸದ್ಯ ಶಿಕ್ಷಕಿ ವೃತ್ತಿ ಮುಂದುವರೆಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

 

ಅಪಾರ್ಟ್‍ಮೆಂಟ್‍ಗಳಲ್ಲಿಯೂ ಹೆಚ್ಚಳ: ಇಲ್ಲಿನ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಂಗಳೂರು ನಗರದಿಂದ ಕೊಂಚ ದೂರವಿರುವ ಅಪಾರ್ಟ್‍ಮೆಂಟ್‍ಗಳಲ್ಲಿಯೂ ಮಾಸಿಕ ವೇತನ ನೀಡುವ ಸ್ವಚ್ಛತೆ ಕೆಲಸಗಳಿಗೆ ನೆರೆಯ ಹಳ್ಳಿಗಳಿಂದ ಮಹಿಳೆಯರು ಆಗಮಿಸಿ ಸೇರ್ಪಡೆಗೊಳ್ಳುತ್ತಿರುವ ಸಂಖೆಯೂ ಹೆಚ್ಚಳವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಯಲಹಂಕದ ಸನ್‍ ಸಿಟಿ ಅಪಾರ್ಟ್‍ಮೆಂಟ್ ಅಸೋಸಿಯೇಷನ್ ಸಂಚಾಲಕ ನವೀನ್ ಗೌಡ, ‘ರಾಜ್ಯ ಸರಕಾರದ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಉದ್ಯೊಗ ಕೇಳಿಕೊಂಡು ಬರುತ್ತಿರುವುದು ಹೆಚ್ಚಾಗಿದೆ. ಕಳೆದ ತಿಂಗಳಿನಲ್ಲಿಯೇ 15ಕ್ಕೂ ಅಧಿಕ ಮಹಿಳೆಯರು ನಮ್ಮ ಅಪಾರ್ಟ್‍ಮೆಂಟ್‍ ಗಳಲ್ಲಿ ಸ್ವಚ್ಛತಾ ಕೆಲಸಗಳಿಗೆ ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ನೆರೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರೇ ಆಗಿದ್ದಾರೆ. ಉಚಿತ ಪ್ರಯಾಣ ಇರುವ ಹಿನ್ನೆಲೆ ಬೆಳಗ್ಗೆಯೇ ಕೆಲಸಕ್ಕೆ ಬಂದು ಮಧ್ಯಾಹ್ನ 2ಗಂಟೆ ಹೊತ್ತಿಗೆ ತಮ್ಮ ಮನೆಗಳಿಗೆ ವಾಪಸ್ಸು ಹೋಗುತ್ತಾರೆ’ ಎಂದು ಮಾಹಿತಿ ನೀಡಿದರು.

ಗಾರ್ಮೆಂಟ್ಸ್ ನಲ್ಲಿ ಸಂಖ್ಯೆ ಹೆಚ್ಚಳ: ಹೆಸರಘಟ್ಟ, ನೆಲಮಂಗಲ ಸೇರಿದಂತೆ ವಿವಿಧ ಭಾಗದ ಗ್ರಾಮೀಣ ಪ್ರದೇಶ ಮಹಿಳೆಯರು ಇಲ್ಲಿನ ಪೀಣ್ಯ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲೂ ಕೆಲಸಕ್ಕೆ ಸೇರುತ್ತಿರುವ ಸಂಖ್ಯೆ ಅಧಿಕವಾಗಿದೆ.

ಈ ಕುರಿತು ಮಾಹಿತಿ ನೀಡಿದ ಗಾರ್ಮೆಂಟ್ಸ್ ವೊಂದರ ವ್ಯವಸ್ಥಾಪಕ ವಿನಾಯಕ ರಾವ್, ‘ಇತ್ತೀಚಿಗೆ ನಮ್ಮ ಗಾರ್ಮೆಂಟ್ಸ್ ಗೆ 115ಕ್ಕೂ ಅಧಿಕ ಮಹಿಳೆಯರು ಸೇರಿದ್ದಾರೆ. ಇವರು ನೆರೆಯ ನೆಲಮಂಗಲ ಪ್ರದೇಶದ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಅಲ್ಲಿ ಕೃಷಿ ಚಟುವಟಿಕೆಗಳ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನುವ ಮಾಹಿತಿ ಇದೆ’ ಎಂದು ತಿಳಿಸಿದರು.

ಬಸ್ ಹೆಚ್ಚಳಕ್ಕೆ ಆಗ್ರಹ..!:

‘ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿದೆ. ಅದರಲ್ಲೂ ಮುಂಜಾನೆ ಸಮಯದಲ್ಲಿ ಬಸ್‍ಗಳ ಕೊರೆತೆ ಉಂಟಾಗಿದೆ. ಇದರಿಂದ ಸೂಕ್ತ ಸಮಯಕ್ಕೆ ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ರಾಜ್ಯ ಸರಕಾರ ಬಸ್‍ಗಳ ಸಂಖ್ಯೆ ಹೆಚ್ಚಳ ಮಾಡಲಿ’ ಎಂದು ಹಲವು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಶಕ್ತಿ ಯೋಜನೆ ಹಿನ್ನೆಲೆ..!:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11ರಂದು ‘ಶಕ್ತಿ' ಯೋಜನೆಗೆ ಚಾಲನೆ ನೀಡಿದ್ದರು. ಸದ್ಯ ಈ ಯೋಜನೆ ಒಂದು ತಿಂಗಳಿಗೂ ಹೆಚ್ಚು ಕಾಲ ಪೂರೈಸಿದ್ದು, ಪ್ರತಿಪಕ್ಷಗಳ ಹಲವು ಟೀಕೆಗಳ ನಡುವೆಯೂ ಯಶಸ್ವಿಯಾಗಿದೆ. ಜತೆಗೆ, ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿದೆ. ಸಾಮಾನ್ಯ ಸರಕಾರಿ ಬಸ್‍ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬಹುದಾಗಿದೆ.

ಇದುವರೆಗೂ ಎಷ್ಟು ಮಹಿಳೆಯರು ಪ್ರಯಾಣ?:

‘ಯೋಜನೆ ಜಾರಿಯಾದ ಜೂನ್ 11ರಿಂದ (ಜು.22)ಶನಿವಾರ ಮಧ್ಯರಾತ್ರಿ ವರೆಗೂ ಬರೋಬ್ಬರಿ 24,63,06,584 ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ. ಇವರ ಟಿಕೆಟ್ ವೆಚ್ಚವೂ ಒಟ್ಟು 580 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತ ಆಗಿದೆ’ ಎಂದು ಸಾರಿಗೆ ಇಲಾಖೆ ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Contributor - ಸಮೀರ್, ದಳಸನೂರು

contributor

Similar News