ಶಿವಮೊಗ್ಗ | ಮಿಲಾದುನ್ನಬಿ ಮೆರವಣೆಗೆ ವೇಳೆ ಕಲ್ಲು ತೂರಾಟ: ನಗರದಲ್ಲಿ ಸೆಕ್ಷನ್ 144 ಜಾರಿ
ಶಿವಮೊಗ್ಗ: ಮಿಲಾದುನ್ನಬಿ ಪ್ರಯುಕ್ತ ನಗರದ ರಾಗಿಗುಡ್ಡದ ಶಾಂತಿನಗರ ಬಳಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದು, ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಪೊಲೀಸರು ಸೆಕ್ಷೆನ್ 144 ಜಾರಿ ಮಾಡಲಾಗಿದೆ.
ಹಿಂದುತ್ವ ಸಂಘಟನೆ ಮಹಾಮಂಡಳದ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಒಂದೇ ದಿನ ಬಂದಿದ್ದರಿಂದ ಶಾಂತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರವಿವಾರ ಮಿಲಾದುನ್ನಬಿ ಮೆರವಣೆಗೆ ನಡೆಯಿತು.
ಪ್ರಾರಂಭದಲ್ಲಿ ಮೆರವಣಿಗೆ ಶಾಂತಿಯುತವಾಗಿ ಸಾಗಿತ್ತು. ಶಾಂತಿ ನಗರದ ಬಳಿ ಮೆರವಣಿಗೆ ಬಂದ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. ಇದರಿಂದ ಉದ್ರಿಕ್ತಗೊಂಡ ಕೆಲವು ಯುವಕರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಾರುಗಳ ಗಾಜು ಒಡೆದಿದ್ದಾರೆ ಎಂದು ಹೇಳಲಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.ತಕ್ಷಣ ಜಾರಿಗೆ ಬರುವಂತೆ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಘಟನಾಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ,ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.