ಜಾತಿ ಗಣತಿ ವರದಿಯನ್ನು ತಿರಸ್ಕರಿಸಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
ಬೆಂಗಳೂರು : ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ(ಜಾತಿ ಗಣತಿ) ವರದಿಯನ್ನು ಯಾವುದ ಕಾರಣಕ್ಕೂ ಅನುಷ್ಠಾನ ಮಾಡದೇ ತಿರಸ್ಕರಿಸಬೇಕು’ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಇಂದಿಲ್ಲಿ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸರಕಾರಕ್ಕೆ ಸಲ್ಲಿಕೆ ಮಾಡಿರುವ ಸಮೀಕ್ಷಾ ವರದಿಯ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ. ಹೀಗಾಗಿ ವರದಿ ಅನುಷ್ಠಾನ ಬೇಡ. ಅದನ್ನು ತಿರಸ್ಕರಿಸಬೇಕು ಎಂದು ಕೋರಿದ್ದಾರೆ.
ಈ ಹಿಂದೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಮೇಲುಸ್ತುವಾರಿಯಲ್ಲಿ ಸಿದ್ಧಪಡಿಸಲಾದ ಜಾತಿ ಗಣತಿ ವರದಿ ದೋಷಪೂರಿತವಾಗಿದೆ. ವಿವಿಧ ಸಮುದಾಯಗಳ ಜನಸಂಖ್ಯೆಯ ಅಂಕಿ-ಅಂಶಗಳಲ್ಲೂ ಎದ್ದು ಕಾಣುವ ವ್ಯತ್ಯಾಸಗಳು ಇವೆ. ಹೀಗಾಗಿ ಈ ವರದಿ ಜಾರಿ ಬೇಡ ಎಂದು ಅವರು ಮನವಿ ಮಾಡಿದ್ದಾರೆ.
ವರದಿಯಲ್ಲಿ ಲಿಂಗಾಯತ ಜನಸಂಖ್ಯೆ ಕೇವಲ 60ಲಕ್ಷ ಎಂದು ಉಲ್ಲೇಖಿಸಿರುವ ಬಗ್ಗೆ ಸೋರಿಕೆಯಾಗಿರುವ ಮಾಹಿತಿಗಳು ಹೇಳಿವೆ. ಆದರೆ ವೀರಶೈವ-ಲಿಂಗಾಯತರ ಸಂಖ್ಯೆ 1.25ಕೋಟಿ ಮೀರಿದೆ. ಸಾದರ ಲಿಂಗಾಯತರನ್ನು ವರದಿಯಲ್ಲಿ 67 ಸಾವಿರ ಎಂದು ತೋರಿಸಲಾಗಿದೆ. ಚನ್ನಗಿರಿ ಕ್ಷೇತ್ರವೊಂದರಲ್ಲೇ ಸುಮಾರು 60 ಸಾವಿರ ಸಾದರ ಲಿಂಗಾಯತರಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ವರದಿ ಸಮರ್ಪಕವಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಗೆ 169 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಜಾತಿ ಗಣತಿಗೆ ಸಂಬಂಧಿಸಿದ ವಿಧಾನಗಳು, ಸಂಶೋಧನೆಗಳು ಮತ್ತು ವೆಚ್ಚಗಳನ್ನು ವಿವರಿಸುವ ಶ್ವೇತಪತ್ರವನ್ನು ಸರಕಾರ ಬಿಡುಗಡೆ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.