ಸಿದ್ದರಾಮಯ್ಯ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ದುರಂತ: ಆರ್. ಅಶೋಕ್

Update: 2025-04-27 19:20 IST
ಸಿದ್ದರಾಮಯ್ಯ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ದುರಂತ: ಆರ್. ಅಶೋಕ್

ಆರ್. ಅಶೋಕ್

  • whatsapp icon

ಬೆಂಗಳೂರು: ‘ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ದೊಡ್ಡ ದುರಂತ’ ಎಂದು ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪಾಕಿಸ್ತಾನ ರತ್ನ’ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು ಎಂದು ಲೇವಡಿ ಮಾಡಿದ್ದಾರೆ.

‘ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ’ ಎಂದು ಅಶೋಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯರ ದೃಷ್ಟಿಕೋನ ಅಕ್ಷಮ್ಯ ಅಪರಾಧ: ವಿಜಯೇಂದ್ರ

‘ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂಬ ದೃಷ್ಟಿಕೋನ ಖಂಡಿತ ಸರಿಯಲ್ಲ. ಇದು ಅಕ್ಷಮ್ಯ ಅಪರಾಧ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಬಗ್ಗೆ ಎಷ್ಟು ಪ್ರೀತಿ ಇದೆ ಎಂದು ಜನತೆಗೆ ಗೊತ್ತಿದೆ. ಆದರೆ, ದೇಶದ ವಿಚಾರ ಬಂದಾಗ, ಕಾಶ್ಮೀರದಲ್ಲಿನ ಭಯೋತ್ಪಾದಕರ ದಾಳಿಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಭಾರತ ಯಾವತ್ತೂ ಯುದ್ಧ ಸಾರಿದ ಇತಿಹಾಸ ಇಲ್ಲ. ಆದರೆ, ಇವತ್ತು ಭಾರತೀಯರ ರಕ್ಷಣೆಯ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಅದನ್ನು ಪ್ರಧಾನಿ ಮೋದಿ ಎಲ್ಲ ಸಿಎಂಗಳ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇಶದ ಜನರ ಕ್ಷಮೆ ಕೂಡ ಕೇಳಬೇಕು. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯನವರಿಂದ ಈ ರೀತಿಯ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ವಿಜಯೇಂದ್ರ ನುಡಿದರು.

ಜಾತಿ ಗಣತಿಗೆ ಸಂಬಂಧಿಸಿ ಸಿದ್ದರಾಮಯ್ಯನವರು ಹಲವಾರು ಸುತ್ತಿನ ಸಭೆಗಳನ್ನು ಮಾಡಿದ್ದಾರೆ. ವಿಶೇಷ ಸಂಪುಟ ಸಭೆಯನ್ನು ನಡೆಸಿದ್ದಾರೆ. ಸಂಪುಟ ಸಭೆಯಲ್ಲಿನ ತೀರ್ಮಾನ ಕುರಿತು ನಿರ್ಣಯವೂ ಸಿದ್ಧವಿತ್ತು. ಆದರೂ,ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ಸಿನ ಹಿರಿಯ ನೇತಾರ ವೀರಪ್ಪ ಮೊಯ್ಲಿಯವರೇ ಜಾತಿ ಜನಗಣತಿ 10 ವರ್ಷದಷ್ಟು ಹಳೆಯದು, ವೈಜ್ಞಾನಿಕವಾಗಿಲ್ಲ ಎಂದಿದ್ದಾರೆ. ಈಡಿಗ, ಮಡಿವಾಳ ಸೇರಿ ಅನೇಕ ಹಿಂದುಳಿದ ಸಮುದಾಯಗಳು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅಂಕಿ-ಅಂಶಗಳ ಕುರಿತು ಆಕ್ಷೇಪಿಸಿದ್ದಾರೆ. ಆದರೂ, ಸಿದ್ದರಾಮಯ್ಯನವರು ಏಕೆ ಇಷ್ಟು ಆತುರ ಮಾಡುತ್ತಿದ್ದಾರೆ ಎಂಬ ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News