ದೀಪಾವಳಿ ಒಳಗೆ ಸಿದ್ದರಾಮಯ್ಯ ಸರಕಾರ ಢಮಾರ್: ಸಿ.ಟಿ.ರವಿ
ಹುಬ್ಬಳ್ಳಿ: 'ಕಳ್ಳನ ಹೆಂಡತಿ ಯಾವತ್ತಿದ್ದ್ರೂ ಡ್ಯಾಶ್ …ಡ್ಯಾಶ್... ದೀಪಾವಳಿ ಒಳಗೆ ಸಿದ್ದರಾಮಯ್ಯ ಸರಕಾರ ಡಮಾರ್..ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಆಗಲಿದೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸಿಎಂ, ಹೊಸ ಸರಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಆಗಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದ್ದೀವಿ ಅಂತಾರೆ ಒಳಗೆ ಸಂಚು ಮಾಡುತ್ತಿದ್ದಾರೆ ಎಂದು ಹೇಳಿದರು.
ಏನೇ ಮುಚ್ವಿಟ್ಟರೂ ಇದು ಭ್ರಷ್ಟಾಚಾರದ ಸರ್ಕಾರ. ಸಿದ್ದರಾಮಯ್ಯರ ವಿರುದ್ಧ ಇರುವ ಮುಡಾ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಲ್ಲಿ ಮಾತ್ರ ಏನೂ ಮುಚ್ಚಿಡಲು ಸಾಧ್ಯವಿಲ್ಲ ಎಂದರು.
'ಬಿಜೆಪಿ ಕೋವಿಡ್ ಸಂದರ್ಭ ಭ್ರಷ್ಟಾಚಾರ ನಡೆಸಿದೆ' ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ತಮ್ಮ ತಪ್ಪನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸಲು, ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅರ್ಕಾವತಿ ಡಿ ನೋಟಿಫಿಕೇಷನ್ ಹೀಗೆ ಸಾಲು ಸಾಲು ಹಗರಣಗಳು ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ ನಡೆದಿದೆ. ನೈತಿಕತೆಯಿಲ್ಲದ ಸರ್ಕಾರ ಇರಬಾರದು' ಎಂದು ಆಗ್ರಹಿಸಿದರು.