‘ಹಜ್ ಯಾತ್ರೆ-2025’ ಯಾತ್ರಿಗಳ ವಿಮಾನಯಾನಕ್ಕೆ ಚಾಲನೆ

ಬೆಂಗಳೂರು: ರಾಜ್ಯ ಹಜ್ ಸಮಿತಿ ವತಿಯಿಂದ ಪ್ರತಿ ವರ್ಷ ಹಜ್ ಯಾತ್ರೆಗೆ ತೆರಳುವ ಯಾತ್ರಿಕರ ಅನುಕೂಲಕ್ಕಾಗಿ ಮೇ 6ರಂದು ಗುಲ್ಬರ್ಗ ಹಾಗೂ ಮೇ 16ರಂದು ಮಂಗಳೂರಿನಲ್ಲಿ ನೂತನ ಹಜ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಹೆಗಡೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 2025ನೇ ಸಾಲಿನ ಹಜ್ ಯಾತ್ರಿಕರ ವಿಮಾನಯಾನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣವಾಗಲೇಬೇಕು. ಅದಕ್ಕಾಗಿ, ಮೇ 16ರಂದು ನಾನೇ ಸ್ವತಃ ಮಂಗಳೂರಿಗೆ ಶಂಕು ಸ್ಥಾಪನೆ ನೆರವೇರಿಸಲು ಹೋಗುತ್ತಿದ್ದೇನೆ. ಮೇ 6ರಂದು ಗುಲ್ಬರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೋಗುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಬೆಂಗಳೂರಿನಲ್ಲಿ ಹಜ್ ಭವನದಲ್ಲಿ ಸಮಾರಂಭ, ಸಮಾವೇಶಗಳನ್ನು ನಡೆಸಲು ಪ್ರತಿ ಬಾರಿ ತಾತ್ಕಾಲಿಕ ಶೆಡ್‍ಗಳನ್ನು ಅಳವಡಿಸಲಾಗುತ್ತದೆ. ಹಜ್ ಯಾತ್ರೆ ಸಂದರ್ಭದಲ್ಲಿ ಇದಕ್ಕಾಗಿ ಸುಮಾರು 2 ಕೋಟಿ ರೂ.ಗಳು ಖರ್ಚಾಗುತ್ತದೆ. ಆದುದರಿಂದ, ಒಂದು ಶಾಶ್ವತ ವ್ಯವಸ್ಥೆ ಮಾಡಲು ಈ ಬಾರಿ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯ ಹಜ್ ಸಮಿತಿ ವತಿಯಿಂದ ಈ ವರ್ಷ 8635 ಜನ ಹಜ್ ಯಾತ್ರೆಗೆ ಹೊರಡುತ್ತಿದ್ದಾರೆ. ಮುಂದಿನ ತಿಂಗಳು 15 ರವರೆಗೆ ಸುಮಾರು 27 ವಿಮಾನಗಳಲ್ಲಿ ಯಾತ್ರಿಗಳು ಪ್ರಯಾಣ ಬೆಳೆಸಲಿದ್ದಾರೆ. ಹಜ್ ಯಾತ್ರೆಗೆ ಹೋಗುವವರ ಪ್ರಯಾಣ ಸುಖಕರವಾಗಿರಲಿ, ಅವರು ಆರೋಗ್ಯವಂತರಾಗಿ ವಾಪಸ್ ಬರಲಿ, ಮಕ್ಕಾ ಹಾಗೂ ಮದೀನಾದಲ್ಲಿ ಇಡೀ ದೇಶದ, ಭಾರತೀಯರ ಪರವಾಗಿ ಪ್ರಾರ್ಥನೆ ಮಾಡಿ ಎಂದು ಅವರು ಕೋರಿದರು.
ನಮ್ಮ ಸರಕಾರ ಒಂದು ಧರ್ಮ, ಒಂದು ವರ್ಗದ ಜನರನ್ನು ಓಲೈಸಲು ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ. ಸಮಾಜದಲ್ಲಿನ ಎಲ್ಲಾ ಬಡವರು ಸಮಾನ ಅವಕಾಶಗಳ ಮೂಲಕ ಬದುಕಬೇಕು ಎಂಬ ಉದ್ದೇಶವನ್ನು ನಾವು ಹೊಂದಿದ್ದೇವೆ. ಮನುಷ್ಯ ಸಮಾಜ ನಿರ್ಮಾಣ ಮಾಡೋಣ, ಪರಸ್ಪರ ಪ್ರೀತಿ, ಗೌರವಿಸುವಂತಹ ಸಮಾಜ ನಿರ್ಮಾಣ ಮಾಡೋಣ ಎಂದು ಅವರು ಕರೆ ನೀಡಿದರು.
ನಮ್ಮ ರಾಜ್ಯದ ಬಜೆಟ್ 4.09 ಲಕ್ಷ ಕೋಟಿ ರೂ. ಅದರಲ್ಲಿ 4500 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗೆ ಕೊಟ್ಟಿರುವುದು ದೊಡ್ಡದಲ್ಲ. ಈ ಸಮಾಜದಲ್ಲಿ ನಿಮಗೂ ಪಾಲಿದೆ. ಹಿಂದೂ, ಕ್ರೈಸ್ತರು ಎಲ್ಲರಿಗೂ ಅವರ ಪಾಲು ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ನಿಮಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ, ಅದನ್ನು ಮಾಡುತ್ತಿದ್ದೇವೆ. ಯಾರು ಏನೇ ಮಾತನಾಡಲಿ ಅದಕ್ಕೆ ನಾವು ಸೊಪ್ಪು ಹಾಕಲ್ಲ. ನಮಗೆ ಸಂವಿಧಾನ, ಸಂವಿಧಾನದ ಆಶಯ ಮುಖ್ಯ ಎಂದು ಮುಖ್ಯಮಂತ್ರಿ ತಿಳಿಸಿದರು.
ಅಲ್ಪಸಂಖ್ಯಾತರಲ್ಲಿ ಶಿಕ್ಷಣದ ಪ್ರಮಾಣ ಅತ್ಯಂತ ಕಡಿಮೆಯಿದೆ ಎಂದು ಸಾಚಾರ್ ವರದಿ ತಿಳಿಸಿದೆ. ಸ್ವಾಭಿಮಾನದಿಂದ ಬದುಕಲು, ಗುಲಾಮಗರಿಯನ್ನು ಕಿತ್ತೊಗೆಯಲು ಅಲ್ಪಸಂಖ್ಯಾತ ಸಮುದಾಯದ ಎಲ್ಲರೂ ಶಿಕ್ಷಣವನ್ನು ಪಡೆಯಲೇಬೇಕು. ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಕರ್ನಾಟಕದಲ್ಲಿ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಸಮಾನರು. ನಮ್ಮ ದೇಶ, ರಾಜ್ಯ ಹಾಗೂ ಭಾರತೀಯರ ಅಭಿವೃದ್ಧಿಗಾಗಿ ಹಜ್ ಯಾತ್ರೆಗೆ ತೆರಳುವವರು ದುಆ ಕರೋ(ಪ್ರಾರ್ಥನೆ ಮಾಡಿ) ಎಂದು ಮುಖ್ಯಮಂತ್ರಿ ಕೋರಿದರು.
ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಈ ಬಾರಿ ಹಜ್ ಯಾತ್ರೆಗೆ ತೆರಳಲು 11007 ಅರ್ಜಿಗಳು ಬಂದಿದ್ದವು, ಈ ಪೈಕಿ 8635 ಮಂದಿ ತೆರಳುತ್ತಿದ್ದಾರೆ. ಆದರೆ, ಖಾಸಗಿ ಹಜ್ ಟೂರ್ ಆಪರೇಟರ್‍ಗಳ ಮೂಲಕ ತೆರಳುವ ಹಜ್ ಯಾತ್ರಿಗಳ ಕೋಟಾವನ್ನು ಸೌದಿ ಅರೇಬಿಯಾ ಸರಕಾರ ರದ್ದು ಮಾಡಿರುವುದರಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಇಡೀ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸುಮಾರು 2 ಸಾವಿರ ಕೋಟಿ ರೂ.ಗಳಷ್ಟು ಮೊತ್ತವನ್ನು ಖಾಸಗಿ ಹಜ್ ಟೂರ್ ಆಪರೇಟರ್‍ಗಳು ವಿಮಾನಯಾನ ಸೇರಿದಂತೆ ಹಜ್ ಯಾತ್ರೆಗೆ ಅಗತ್ಯವಿರುವ ಸಿದ್ಧತೆಗಳಿಗಾಗಿ ವಿನಿಯೋಗಿಸಿದ್ದಾರೆ. ಅವರ ಸಮಸ್ಯೆಯೂ ಶೀಘ್ರವಾಗಿ ಬಗೆಹರಿಯಲಿ ಎಂದು ಹಜ್ ಯಾತ್ರಿಗಳು ಪ್ರಾರ್ಥನೆ ಮಾಡಿ ಎಂದು ಅವರು ಮನವಿ ಮಾಡಿದರು.
ಮಂಗಳೂರು ಹಾಗೂ ಗುಲ್ವರ್ಗದಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 10 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಿದ್ದಾರೆ. ಸುರತ್ಕಲ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇನಾಯತ್ ಅಲಿಯವರು ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ 1.8 ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 54 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಪೈಕಿ 13-14 ಸಾವಿರ ಕೋಟಿ ರೂ.ಗಳು ನಮ್ಮ ಸಮುದಾಯಕ್ಕೂ ಅನುಕೂಲವಾಗಿದೆ. ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಬಜೆಟ್ 3600 ಕೋಟಿ ರೂ.ಗಳು. ಆದರೆ, ನಮ್ಮ ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿರುವ ಅನುದಾನ 4500 ಕೋಟಿ ರೂ.ಇಡೀ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಅನುದಾನ ನೀಡಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಮೌಲಾನಾ ಮಕ್ಸೂದ್ ಇಮ್ರಾನ್ ಮಾತನಾಡಿದರು. ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಖಾರ್ ಅಹ್ಮದ್ ಖಾನ್(ಟಿಪ್ಪು) ಸ್ವಾಗತಿಸಿದರು. ಆಝಮ್ ಶಾಹಿದ್ ನಿರೂಪಿಸಿದರು. ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ದುಆ ಮಾಡಿದರು.
ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್, ಶಾಸಕರಾದ ಕನೀಝ್ ಫಾತಿಮಾ, ಎ.ಸಿ.ಶ್ರೀನಿವಾಸ, ಯಾಸೀರ್ ಅಹ್ಮದ್ ಖಾನ್ ಪಠಾಣ್, ವಿಧಾನಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಅಬ್ದುಲ್ ಜಬ್ಬಾರ್, ಬಲ್ಕೀಸ್ ಬಾನು, ಮಾಜಿ ಸಚಿವ ಆರ್.ರೋಷನ್ ಬೇಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಮ್ಮು ಕಾಶ್ಮಿರದ ಪಹಲ್ಗಾಮ್‍ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತರಾದವರ ಸ್ಮರಣಾರ್ಥ ಕಾರ್ಯಕ್ರಮದ ಆರಂಭದಲ್ಲಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.